ನವದೆಹಲಿ: ಚಿತ್ರರಂಗ ಹಾಗೂ ಉದ್ಯಮ ಕ್ಷೇತ್ರದ ಗಮನ ಸೆಳೆಯುವಂಥ ಬೆಳವಣಿಗೆಯೊಂದು ಇಂದು ನಡೆದಿದೆ. ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿಯೂ ಆಗಿರು ರಾಜ್ ಕುಂದ್ರಾ ಅವರನ್ನು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.
ಅಶ್ಲೀಲ ಸಿನಿಮಾಗಳನ್ನು ತಯಾರಿಸಿ ಅವುಗಳನ್ನು ಕೆಲವು ಆ್ಯಪ್ಗಳ ಮೂಲಕ ಪ್ರಸಾರ ಮಾಡುತ್ತಿದ್ದ ಆರೋಪ ಅವರ ಮೇಲಿದೆ. ಅದರ ರೂವಾರಿ ಅವರು ಎಂಬ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಲಭಿಸಿದ ಆಧಾರದ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಅಶ್ಲೀಲ ಸಿನಿಮಾಗಳನ್ನು ಕೆಲವು ಆ್ಯಪ್ಗಳ ಮೂಲಕ ಪ್ರಸಾರ ಮಾಡುತ್ತಿರುವ ಕುರಿತು 2021ರ ಫೆಬ್ರವರಿಯಲ್ಲಿ ಮುಂಬೈ ಕ್ರೈಂ ಬ್ರ್ಯಾಂಚ್ನಲ್ಲಿ ಕೇಸು ದಾಖಲಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ 2021ರ ಜುಲೈ 19ರಂದು ರಾಜ್ ಕುಂದ್ರಾ ವಿರುದ್ಧ ದೂರು ದಾಖಲಾಗಿತ್ತು. ಈ ಎಲ್ಲದರ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದಾರೆ.
ರಾಜ್ ಕುಂದ್ರಾ 2009ರಲ್ಲಿ ನಟಿ ಶಿಲ್ಪಾ ಶೆಟ್ಟಿ ಅವರನ್ನು ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದಕ್ಕೂ ಮೊದಲು ರಾಜ್, ಕವಿತಾ ಎಂಬವರನ್ನು ಮದುವೆಯಾಗಿದ್ದು, ಆ ದಾಂಪತ್ಯಕ್ಕೆ ಒಂದು ಹೆಣ್ಣು ಮಗು ಜನಿಸಿತ್ತು. (ಏಜೆನ್ಸೀಸ್)