ಶಿವಮೊಗ್ಗ: ಕಾವಿ ತೊಟ್ಟು ಮಠ-ಪೀಠಾಧಿಪತಿಗಳಾಗುವವರು ಲೌಕಿಕ ಪ್ರಪಂಚದ ವ್ಯಾಮೋಹ ಮೀರಬೇಕು. ಮಾನಸಿಕ ಶುದ್ಧತೆ ಕಾಪಾಡಿಕೊಳ್ಳಬೇಕು. ನಡೆ-ನುಡಿ ಪರಿಶುದ್ಧವಾಗಿರಬೇಕು ಎಂದು ಶ್ರೀ ಶೀಲಸಂಪಾದನಾ ಮಠದ ಪೀಠಾಧ್ಯಕ್ಷ ಡಾ. ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಭದ್ರಾವತಿ ತಾಲೂಕಿನ ಗೋಣಿಬೀಡಿನ ಶ್ರೀ ಶೀಲಸಂಪಾದನಾ ಮಠದಲ್ಲಿ ಭಾನುವಾರ ಅನುಭಾವ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದ ಅವರು, ಮನಸ್ಸು ಅಂತರ್ಮುಖಿಯಾದರೆ ಲೌಕಿಕ ಪ್ರಪಂಚದ ವ್ಯಾಮೋಹ ಕಳಚಿ ಬೀಳುತ್ತದೆ ಎಂದರು.
ನಮ್ಮೊಳಗಿನ ಚೈತನ್ಯದ ಕಡೆಗೆ ಹರಿಯುವ ಮನಸ್ಸು ಸದಾ ಒಳಮುಖವಾಗುತ್ತದೆ. ಮನುಷ್ಯನ ಮನಸ್ಸು ಹೊರಗಿನ ವಸ್ತುಗಳಲ್ಲೇ ಸುಖ-ಸಂತೋಷ, ಆನಂದ ಇದೆಯೆಂದು ಭಾವಿಸುತ್ತದೆ. ಆದ್ದರಿಂದ ಮನಸ್ಸು ಹೊರಮುಖವಾಗಿಯೇ ಇರುತ್ತದೆ. ಆನಂದ, ತೃಪ್ತಿ, ಸಂತೋಷ ಎಲ್ಲವೂ ಪರಮಾತ್ಮನಲ್ಲೇ ಇದೆ. ಪರಮಾತ್ಮ ಹೊರಗಿಲ್ಲ, ನಮ್ಮ ಒಳಗೇ ಇದ್ದಾನೆ. ಅವನನ್ನು ಕಾಣುವುದೇ ನಮ್ಮ ಉದ್ದೇಶ ಎಂದುಕೊಂಡಾಗ ಮನಸ್ಸು ಅಂತರ್ಮುಖಿಯಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಯೋಜನಾ ಮಂಡಳಿ ಸದಸ್ಯ ನಜೀರ್ ಅಹಮದ್, ಸಮಾಜದಲ್ಲಿ ಎಲ್ಲ ಧರ್ಮದವರು ನಾನು ಎನ್ನುವುದಕ್ಕಿಂತ ನಾವು, ನನ್ನವರು ಎಂಬುವುದಕ್ಕಿಂತ ನಮ್ಮವರು ಎಂದು ಒಗ್ಗಟ್ಟಿನಿಂದ ಸಹೋದರರಂತೆ ಬದುಕಬೇಕಿದೆ. ಸಹಕಾರ ಮತ್ತು ಸಹಬಾಳ್ವೆ ಬದುಕಿನ ತತ್ವವಾಗಬೇಕಿದೆ. ಪರಸ್ಪರ ಹೊಂದಾಣಿಕೆ ಮೂಲಕ ಅಧ್ಯಾತ್ಮದ ದಾರಿಯಲ್ಲಿ ಸಾಗಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ನೀರು ಪೂರೈಕೆಯ ನಿರ್ದೇಶಕ ಗಂಗಾಧರ ಸ್ವಾಮಿ, ನಜೀರ್ ಅಹಮದ್ ಅವರನ್ನು ಸನ್ಮಾನಿಸಲಾಯಿತು. ಅಥಣಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುರುಘೇಂದ್ರ ಪಾಟೀಲ್ ಅವರಿಗೆ ಗುರುರಕ್ಷೆ ನೀಡಲಾಯಿತು. ಕಸ್ತೂರಿಬಾ ಬಾಲಕಿಯರ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಬಿ.ಎನ್.ತಂಬೂಳಿ ಉಪನ್ಯಾಸ ನೀಡಿದರು.
ಶ್ರೀ ಶೀಲಸಂಪಾದನಾ ಮಠ ಸ್ಪಿರಿಚ್ಯುಯಲ್ ಫೌಂಡೇಷನ್‌ನ ಕಾರ್ಯಾಧ್ಯಕ್ಷ ಎಸ್.ದಯಾಶಂಕರ್, ಕಾಳೇನಹಳ್ಳಿಯ ಶ್ರೀ ಶಿವಯೋಗಾಶ್ರಮದ ಆಡಳಿತಾಧಿಕಾರಿ ಜಿ.ಎ.ಹಿರೇಮಠ, ನಿವೃತ್ತ ಪ್ರಾಧ್ಯಾಪಕ ಕುಮಾರ ಚಲ್ಯ, ಡಿಸಿಸಿ ಬ್ಯಾಂಕ್‌ನ ಡಿಜಿಎಂ ಕುಮಾರ್ ಉಪಸ್ಥಿತರಿದ್ದರು.