ನ್ಯೂಸ್

Shiggaon Bypoll| ಬಂಡಾಯ ಅಭ್ಯರ್ಥಿ ಮನವೊಲಿಸಿದ CM Siddaramaiah; ಬಳಿಕ ಹೇಳಿದ್ದಿಷ್ಟು

ಬೆಂಗಳೂರು: ಶಿಗ್ಗಾಂವಿ ಉಪಚುನಾವಣೆಯಲ್ಲಿ (Shiggaon Bypoll) ಸ್ಫರ್ಧಿಸಲು ಟಿಕೆಟ್​ ಸಿಗದಿದ್ದಕ್ಕೆ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಶಾಸಕ ಅಜ್ಜಂಪೀರ್​ ಖಾದ್ರಿ ಅವರ ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಯಶಸ್ವಿಯಾಗಿದ್ದು, ಕಾಂಗ್ರೆಸ್ ಪಾಳಯಕ್ಕೆ ಎದುರಾಗಿದ್ದ ಕಂಟಕವೊಂದು ದೂರಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಸಿಎಂ ಸಿದ್ದರಾಮಯ್ಯ (CM Siddaramaiah), ಶಿಗ್ಗಾಂವ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಜ್ಜಂಪೀರ್ ಖಾದ್ರಿ ಅವರ ಜೊತೆ ಮಾತುಕತೆ ನಡೆಸಿ, ಪಕ್ಷದ ಹಿತದೃಷ್ಟಿಯಿಂದ ನಾಮಪತ್ರ ಹಿಂಪಡೆಯುವಂತೆ ತಿಳಿಸಿದೆ. ಈ ವೇಳೆ ಅವರು ತಮ್ಮ ನಾಮಪತ್ರ ಹಿಂಪಡೆಯುವ ಜೊತೆಗೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಕ್ರಿಯವಾಗಿ ಕೆಲಸ ಮಾಡುವುದಾಗಿ ವಾಗ್ದಾನ ನೀಡಿರುವುದಾಗಿ ತಿಳಿಸಿದ್ದಾರೆ.

ಸಚಿವ್ ಜಮೀರ್​ ಕಾರಿಗೆ ಕಲ್ಲೇಟು 

ಟಿಕೆಟ್​ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಅಜ್ಜಂಪೀರ್ ಖಾದ್ರಿ ಮನವೊಲಿಸಲು ಸಚಿವ ಜಮೀರ್​​ ಅಹ್ಮದ್​ ಖಾನ್​ (Zameer Ahmad Khan) ಕಸರತ್ತು ನಡೆಸಿದ್ದರು. ಆದರೆ ಸಂಧಾನ ವಿಫಲವಾಗಿದ್ದು, ಖಾದ್ರಿ ಕೊನೆ ಕ್ಷಣದಲ್ಲಿ ಬೈಕ್​ನಲ್ಲಿ ದಾಖಲೆ ಹಿಡಿದು ನಾಮಪತ್ರ ಸಲ್ಲಿಕೆ ಮಾಡಿದ್ದರು. ಇನ್ನು ಸಂಧಾನಕ್ಕೆ ಬಂದಿದ್ದ ಸಚಿವ ಜಮೀರ್​​ ಅಹ್ಮದ್​ ಖಾನ್ ಅವರ ಕಾರಿನ ಮೇಲೆ ಖಾದ್ರಿ ಅಭಿಮಾನಿಗಳು ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಕಾರಿನ ಗಾಜು ಪುಡಿಪುಡಿಯಾಗಿತ್ತು.

ಈ ವಿಚಾರವನ್ನು ತಿಳಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅಜ್ಜಂಪೀರ್​ ಖಾದ್ರಿ ಅವರನ್ನು ಕರೆಸಿ ಮಾತುಕತೆ ನಡೆಸಿದ್ದು, ನಾಮಪತ್ರ ಹಿಂಪಡೆಯುವಂತೆ ಸೂಚಿಸಿ ಬಂಡಾಯವನ್ನು ಶಮನಗೊಳಿಸಿದ್ದಾರೆ. ಇದರಿಂದ ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ ಮತ ವಿಭಜನೆಯ ಆತಂಕ ದೂರಾಗಿದೆ. ಆದರೆ, ಟಿಕೆಟ್​ ಸಿಗದಿದ್ದಕ್ಕೆ ಅಸಮಾಧಾನಗೊಂಡು ಬಂಡಾಯ ಸಾರಿರುವ ಮಂಜುನಾಥ್​ ಕುನ್ನೂರು ಅವರ ಮನವನ್ನು ರಾಜ್ಯ ಕಾಂಗ್ರೆಸ್​ ನಾಯಕರು ಒಲಿಸುತ್ತಾರಾ ಇಲ್ಲವಾ ಎಂದು ಕಾದುನೋಡಬೇಕಿದೆ.