ನ್ಯೂಸ್

ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್​ ಹಸೀನಾ ವಿರುದ್ಧ ಕೊಲೆ ಕೇಸ್​ ದಾಖಲು; ಕಾರಣ ಹೀಗಿದೆ

ಢಾಕಾ: ಬಾಂಗ್ಲಾದೇಶದಲ್ಲಿನ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡ ಬಳಿಕ ಶೇಖ್​ ಹಸೀನಾ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದರು. ಸದ್ಯ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಪದಚ್ಯುತ ಪ್ರಧಾನಿ ಶೇಖ್​ ಹಸೀನಾ ವಿರುದ್ಧ ಬಾಂಗ್ಲಾದೇಶದಲ್ಲಿ ದೂರು ದಾಖಲಾಗಿದೆ. ಶೇಖ್​ ಹಸೀನಾ ಸೇರಿ ಇತರ 6 ಮಂದಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.

ಸರ್ಕಾರದ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಅವಾಮಿ ಲೀಗ್ ನೇತೃತ್ವದ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳ ಬಳಿಕ ಆಗಸ್ಟ್ 5 ರಂದು ಶೇಖ್​ ಹಸೀನಾ ರಾಜೀನಾಮೆ ನೀಡಿದರು. ಇದೇ ಮೊಟ್ಟಮೊದಲ ಬಾರಿಗೆ ಶೇಖ್ ಹಸೀನಾ ವಿರುದ್ಧ ದೂರು ದಾಖಲಿಸಲಾಗಿದೆ. ಮೊಹಮ್ಮದ್‌ಪುರದಲ್ಲಿ ಮೀಸಲಾತಿ ಸುಧಾರಣ ಆಂದೋಲವನ್ನು ಬೆಂಬಲಿಸಿ ಜುಲೈ 19 ರಂದು ನಡೆಸಿದ ಮೆರವಣಿಗೆಯಲ್ಲಿ ಪೋಲಿಸ್ ಗುಂಡೇಟಿಗೆ ಬಲಿಯಾದ ಕಿರಾಣಿ ಅಂಗಡಿ ಮಾಲೀಕ ಅಬು ಸಯೀದ್‌ನ ಹಿತೈಷಿಯೊಬ್ಬರು ಈ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ದೂರು ದಾಖಲಾಗಿರುವ ಇತರೆ ಆರೋಪಿಗಳಲ್ಲಿ ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿ ಒಬೈದುಲ್ ಕ್ವಾಡರ್, ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್ ಕಮಾಲ್ ಮತ್ತು ಮಾಜಿ ಪೊಲೀಸ್ ಮಹಾನಿರೀಕ್ಷಕ ಚೌಧರಿ ಅಬ್ದುಲ್ಲಾ ಅಲ್ ಮಾಮುನ್ ಸೇರಿದ್ದಾರೆ. ಅಲ್ಲದೆ ಹಲವರು ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಶೇಖ್​​ ಹಸೀನಾ ಸರ್ಕಾರದ ಪತನದ ನಂತರ ದೇಶಾದ್ಯಂತ ಭುಗಿಲೆದ್ದ ಹಿಂಸಾಚಾರದ ಘಟನೆಗಳಲ್ಲಿ ಬಾಂಗ್ಲಾದೇಶದಲ್ಲಿ 230ಕ್ಕೂ ಹೆಚ್ಚು ಜನರು ಮೃತಪಟ್ಟರು. ಮೀಸಲಾತಿ ವಿರೋಧಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಸಾವಿನ ಸಂಖ್ಯೆ 560ಕ್ಕೆ ತಲುಪಿದೆ.(ಏಜೆನ್ಸೀಸ್​​)