ನ್ಯೂಸ್

ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಪಾಕ್​ ಪ್ರಧಾನಿ: ಮೋದಿ-ಪುಟಿನ್​ ಹೋಗುವಾಗ ಕೈ ಕಟ್ಟಿ ನಿಂತ ಶೆಹಬಾಜ್ ಷರೀಫ್! Pak PM

Pak PM : ಚೀನಾದ ಟಿಯಾಂಜಿನ್‌ನಲ್ಲಿ ಶಾಂಘೈ ಸಹಕಾರ ಒಕ್ಕೂಟ (SCO) ಶೃಂಗಸಭೆ ನಡೆಯುತ್ತಿದೆ. ಇದೊಂದು ಜಾಗತಿಕ ಸಮಾವೇಶವಾಗಿದ್ದು, ಇಂತಹ ಮಹತ್ವದ ವೇದಿಕೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಕಡೆಗಣಿಸಿರುವಂತೆ ತೋರುತ್ತದೆ. ನಿಜ ಹೇಳಬೇಕೆಂದರೆ, ಪಾಕ್​ ಪ್ರಧಾನಿಯ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಎಸ್​ಸಿಒ ಶೃಂಗಸಭೆ ಆರಂಭವಾಗುವ ಮುನ್ನ ವಿವಿಧ ದೇಶದ ನಾಯಕರು ಕೆಲ ಕಾಲ ಮಾತುಕತೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸುಂಕ ಸಮರದಿಂದಾಗಿ ಜಾಗತಿಕವಾಗಿ ವ್ಯಾಪಾರ ಉದ್ವಿಗ್ನತೆ ಹೆಚ್ಚಾಗಿರುವ ಸಮಯದಲ್ಲಿ ಮೂರು ದೇಶಗಳ ನಾಯಕರು ಆತ್ಮೀಯವಾಗಿ ಚರ್ಚೆ ನಡೆಸಿರುವುದು ಎಲ್ಲರ ಗಮನ ಸೆಳೆದಿದೆ. ಜಾಗತಿಕ ನಾಯಕರು ಶೃಂಗಸಭೆಯಲ್ಲಿ ಬಹಳ ಸೌಹಾರ್ದಯುತವಾಗಿ ಮಾತನಾಡಿದರು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ವೈರಲ್​ ಆಗುತ್ತಿರುವ ವಿಡಿಯೋವೊಂದರಲ್ಲಿ ಟಿಯಾಂಜಿನ್‌ನಲ್ಲಿ ನಡೆದ ಎಸ್​ಸಿಒ ಅಧಿವೇಶನಕ್ಕೆ ಕೆಲವೇ ನಿಮಿಷಗಳ ಮೊದಲು ಪ್ರಧಾನಿ ಮೋದಿ, ಸಂಭಾಷಣೆಯಲ್ಲಿ ತೊಡಗಿದ್ದಾಗ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೋಪದಿಂದ ಮೋದಿಯನ್ನು ನೋಡುತ್ತಿರುವುದು ಕಂಡುಬಂದಿದೆ. ಪುಟಿನ್​ ಜೊತೆ ಮಾತನಾಡುತ್ತಾ ಸಾಗುವಾಗ ಪಕ್ಕದಲ್ಲೇ ಕೈ ಕಟ್ಟಿಕೊಂಡು ಷರೀಫ್​ ಮೌನವಾಗಿ ನಿಂತಿದ್ದರು. ಅಲ್ಲದೆ, ಶೃಂಗಸಭೆಯಲ್ಲಿ ಷರೀಫ್​ ಅವರನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಅದಕ್ಕೆ ಸಾಕ್ಷಿಯಾಗಿ ಕೆಲವು ವಿಡಿಯೋಗಳು ಹರಿದಾಡುತ್ತಿದ್ದು, ಅವುಗಳಲ್ಲಿ ಷರೀಫ್​ ಅವರನ್ನು ಜಾಗತಿಕ ನಾಯಕರು ಹೆಚ್ಚು ಮನ್ನಣೆ ನೀಡದಿರುವುದನ್ನು ಕಾಣಬಹುದಾಗಿದೆ. ಶೃಂಗಸಭೆಗೂ ಮುನ್ನ ಷರೀಫ್​ ಹೊರತುಪಡಿಸಿ ಅನೇಕ ಜಾಗತಿಕ ನಾಯಕರ ಜೊತೆ ಪ್ರಧಾನಿ ಮೋದಿ ಫೋಟೋ ಸಹ ತೆಗೆಸಿಕೊಂಡರು. ಈ ಎಲ್ಲ ಬೆಳವಣಿಗೆಯಿಂದ ಪಾಕ್​ ಪ್ರಧಾನಿಗೆ ಮುಖಭಂಗವಾದಂತಾಗಿದೆ.

ಇದರ ನಡುವೆ, ಪ್ರಧಾನಿ ಮೋದಿ ಅವರು ಅಧ್ಯಕ್ಷ ಪುಟಿನ್ ಮತ್ತು ಅಧ್ಯಕ್ಷ ಕ್ಸಿ ಅವರೊಂದಿಗೆ ಇರುವ ಫೋಟೋಗಳನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿ, ಸ್ನೇಹಪರ ವಿನಿಮಯವನ್ನು ಎತ್ತಿ ತೋರಿಸಿದರು. ಅಲ್ಲದೆ, ಟಿಯಾಂಜಿನ್‌ನಲ್ಲಿ ಇದೇ ರೀತಿ ಸಂವಹನ ಮುಂದುವರಿಯುತ್ತದೆ. SCO ಶೃಂಗಸಭೆಯ ಸಮಯದಲ್ಲಿ ಅಧ್ಯಕ್ಷ ಪುಟಿನ್ ಮತ್ತು ಅಧ್ಯಕ್ಷ ಕ್ಸಿ ಅವರೊಂದಿಗೆ ನಮ್ಮ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಬರೆದಿದ್ದಾರೆ. ಬಳಿಕ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಭಯೋತ್ಪಾದನೆಯ ವಿರುದ್ಧ ಗುಡುಗಿದರು. ತಮ್ಮ ಮಾತಿನ ಉದ್ದಕ್ಕೂ ಉಗ್ರವಾದದ ಬಗ್ಗೆ ಮಾತನಾಡಿದ ಮೋದಿ, ಪರೋಕ್ಷವಾಗಿ ಪಾಕಿಸ್ತಾನಕ್ಕೆ ಚಾಟಿ ಬೀಸಿದರು.

ಈ ವರ್ಷದ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಅಂಗ ಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ನಡೆಸಿದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಎಸ್​ಸಿಒ ಶೃಂಗಸಭೆಯಲ್ಲಿ ಪಾಕ್​ ಪ್ರಧಾನಿಗೆ ಪ್ರಧಾನಿ ಮೋದಿ ಸೊಪ್ಪು ಹಾಕಲಿಲ್ಲ. 26 ಅಮಾಯಕರನ್ನು ಬಲಿಪಡೆದುಕೊಂಡ ಪಹಲ್ಗಾಮ್​ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಭಾರತ ದೂಷಿಸಿದೆ. (ಏಜೆನ್ಸೀಸ್​)