ಶಿವಮೊಗ್ಗ: ಕುರಿಯನ್ನು ಪ್ರಾಚೀನ ಕಾಲದಿಂದಲೂ ಉಣ್ಣೆ ಮತ್ತು ಮಾಂಸಕ್ಕಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸಾಕುತ್ತಿದ್ದಾರೆ. ಕುರಿಗಳು ಮಾಂಸ, ಉಣ್ಣೆ, ಚರ್ಮ ಮತ್ತು ಉತ್ಕೃಷ್ಟ ಗೊಬ್ಬರವನ್ನು ಒದಗಿಸುತ್ತವೆ. ಇದರಿಂದಾಗಿ ಸಾವಿರಾರು ಜನರಿಗೆ ಉದ್ಯೋಗಾವಕಾಶ ದೊರೆತಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್ ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಕುರಿ ಮತ್ತು ಆಡು ಸಾಕಾಣಿಕೆ ಕುರಿತ ಮೂರು ದಿನಗಳ ಕೌಶಲಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಗ್ರ ಕೃಷಿ ಪದ್ಧತಿಯಲ್ಲಿ ಪಶುಪಾಲನೆಯಲ್ಲಿ ಹಸುಗಳ ಸಾಕಾಣಿಕೆಯ ನಂತರದ ಮುಖ್ಯ ಕಸುಬು ಎಂದರೆ ಕುರಿ ಮತ್ತು ಆಡು ಸಾಕಾಣಿಕೆ ಎಂದು ತಿಳಿಸಿದರು.
ಕುರಿ ಮತ್ತು ಆಡು ಸಾಕಾಣಿಕೆಯಿಂದ ನಿರುದ್ಯೋಗ ಸಮಸ್ಯೆ ದೂರ ಮಾಡಬಹುದು. ಆಡು ಸಾಕಾಣಿಕೆಗೆ ಕಡಿಮೆ ಬಂಡವಾಳ ಸಾಕು. ಆಡು ಸಾಕಾಣಿಕೆಯು ಮಾಂಸ ಉತ್ಪಾದನೆಯ ಜತೆಗೆ ಹಾಲು ಉತ್ಪಾದನೆಗೂ ಸಹಕಾರಿಯಾಗಿದೆ. ಇವು ಎಲ್ಲ ಹವಾಮಾನಕ್ಕೆ ಸುಲಭವಾಗಿ ಹೊಂದಿಕೊಂಡು, ಒಂದು ಬಾರಿಗೆ ಎರಡು ಮರಿಗಳನ್ನು ಹಾಕುವುದರಿಂದ ನಷ್ಟಸ ಸಂಭವ ಅತಿ ಕಡಿಮೆ ಎಂದರು.
ಆಡು ಸಾಕಲು ಹೆಚ್ಚಿನ ಜಾಗ, ಕೆಲಸಗಾರರು, ಶ್ರಮ ಬೇಕಿಲ್ಲ. ಹೆಣ್ಣು ಮಕ್ಕಳೂ ಇವುಗಳನ್ನು ನಿಭಾಯಿಸಬಹುದು. ಇದು ನಿರಂತರ ಆದಾಯ ನೀಡುವ ಚಟುವಟಿಕೆಯಾಗಿದೆ. ಹೀಗಾಗಿ ಆಡು ಮತ್ತು ಕುರಿ ಸಾಕಣಿಕೆಗೆ ಎಲ್ಲರೂ ಒತ್ತು ನೀಡಬೇಕೆಂದರು.
ಹಿರಿಯ ವಿಜ್ಞಾನಿ ಡಾ.ಸುನೀಲ್ ಮಾತನಾಡಿ, ಶಿಬಿರಾರ್ಥಿಗಳಿಗೆ ಕುರಿ ಮತ್ತು ಮೇಕೆಗಳ ತಳಿಗಳು, ಅವುಗಳ ಗುಣಲಕ್ಷಣಗಳು, ಕುರಿ ಮತ್ತು ಮೇಕೆಗಳಿಗೆ ತಗುಲುವ ಮುಖ್ಯ ರೋಗಗಳು, ಅವುಗಳ ನಿಯಂತ್ರಣ, ಮೇವಿನ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳು, ಕುರಿ ಮತ್ತು ಮೇಕೆಗಳಲ್ಲಿ ವಸತಿ ನಿರ್ವಹಣೆ ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಗುವುದು ಎಂದರು.
ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಬಿ.ಎಂ.ಸತೀಶ್, ವಿಜ್ಞಾನಿಗಳಾದ ಡಾ.ಎನ್.ಸುಧಾರಾಣಿ, ಡಾ.ರುದ್ರಗೌಡ ಮುಂತಾದವರಿದ್ದರು.