ಬೆಂಗಳೂರು: ಶೀಲ ಶಂಕಿಸಿ ದುಪ್ಪಟ್ಟಾದಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಪತಿ ಪರಾರಿ ಆಗಿದ್ದಾನೆ.
ಗಂಗೊಂಡನಹಳ್ಳಿ 3ನೇ ಮುಖ್ಯರಸ್ತೆ ನಿವಾಸಿ ಗೌಸಿಯಾ ಖಾನಂ (31) ಮೃತೆ. ವೆಲ್ಡಿಂಗ್ ಕೆಲಸ ಮಾಡುವ ಇಮ್ರಾನ್ ಖಾನ್ ಎಂಬಾತನ ಜತೆಗೆ ವಿವಾಹವಾಗಿದ್ದು, ಈ ದಂಪತಿಗೆ 4 ವರ್ಷದ ಗಂಡುಮಗುವಿದೆ. ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ, ಪದೇಪದೆ ಜಗಳ ಮಾಡುತ್ತಿದ್ದ. ಶುಕ್ರವಾರ ರಾತ್ರಿಯೂ ಜಗಳ ನಡೆದು ವಿಕೋಪಕ್ಕೆ ತಿರುಗಿದ್ದಾಗ ಪತ್ನಿ ಮೇಲೆ ಹಲ್ಲೆ ನಡೆಸಿ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಬಳಿಕ ಪುತ್ರನನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ಶನಿವಾರ ರಾತ್ರಿ ಗೌಸಿಯಾ ಮೊಬೈಲ್ಗೆ ಸಹೋದರ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಮನೆಗೆ ಬಂದು ನೋಡಿದಾಗ ಬಾಗಿಲು ಮುಚ್ಚಿರುವುದು ಕಂಡುಬಂದಿತ್ತು. ಬಲವಂತವಾಗಿ ಬಾಗಿಲು ತಳ್ಳಿ ಒಳಹೋಗಿ ನೋಡಿದಾಗ ಸೋದರಿ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು.
ಚಂದ್ರಾ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಆರೋಪಿಯ ಬಂಧನಕ್ಕೆ ಬಲೆಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.