ನವದೆಹಲಿ: ಸುಷ್ಮಾ ಸ್ವರಾಜ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡ ಮೇಲೆ ಅದರ ಕಾರ್ಯವೈಖರಿಯೇ ಬದಲಾಗಿತ್ತು. ಆ ಇಲಾಖೆಗೆ ಮಾನವೀಯತೆಯ ಸ್ಪರ್ಶ ಕೊಟ್ಟವರು ಅವರು. ಜಗತ್ತಿನ ವಿವಿಧ ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು.
ಕಳೆದ ವರ್ಷ ಸುಷ್ಮಾ ಸ್ವರಾಜ್ ಅವರು ಮೃತಪಟ್ಟಾಗ ಪಾಕಿಸ್ತಾನದ ವಿದೇಶಾಂಗ ಸಚಿವರಿಂದ ಹಿಡಿದು ಹಲವು ರಾಷ್ಟ್ರಗಳ ಪ್ರಮುಖರು, ಭಾರತದಲ್ಲಿರುವ ವಿದೇಶಿ ರಾಯಭಾರಿಗಳು ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಸುಷ್ಮಾ ಸ್ವರಾಜ್ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದರು. ಇದನ್ನೂ ಓದಿ: ಸುಷ್ಮಾ ಸ್ವರಾಜ್ ಮೊದಲ ಪುಣ್ಯತಿಥಿಯಂದು ಗೌರವ ಸಲ್ಲಿಸಿದ ಪ್ರಧಾನಿ ಮೋದಿ…
ಸುಷ್ಮಾ ಸ್ವರಾಜ್ ಮೃತಪಟ್ಟು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ದುಲ್ಲಾ ಶಾಹೀದ್ ಅವರು ಟ್ವೀಟ್ ಮೂಲಕ ಸುಷ್ಮಾ ಸ್ವರಾಜ್ರನ್ನು ನೆನಪಿಸಿಕೊಂಡಿದ್ದಾರೆ. ವಿಡಿಯೋವೊಂದನ್ನು ಶೇರ್ ಮಾಡಿಕೊಂಡ ಅವರು, ಭಾರತದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಗೌರವ ಅರ್ಪಿಸುತ್ತಿದ್ದೇನೆ. ಅವರು ನನ್ನ ಉತ್ತಮ ಸ್ನೇಹಿತೆಯಾಗಿದ್ದರು. ಹಾಗೇ ರಾಜತಾಂತ್ರಿಕತೆಯಲ್ಲಿ ಮಹಾನ್ ಶಕ್ತಿಯಾಗಿದ್ದರು. ಭಾರತ-ಮಾಲ್ಡೀವ್ಸ್ ನಡುವಿನ ಪಾಲುದಾರಿಕೆ, ಸಂಬಂಧವನ್ನು ಬಲಪಡಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ಶ್ಲಾಘನೀಯ ಪ್ರಯತ್ನಗಳನ್ನು ಮಾಡಿದ್ದರು ಎಂದು ಅಬ್ದುಲ್ಲಾ ಶಾಹೀದ್ ಹೇಳಿದ್ದಾರೆ. (ಏಜೆನ್ಸೀಸ್)