ನ್ಯೂಸ್

ವಯನಾಡಿಗೆ ಭೇಟಿಕೊಟ್ಟು ಸ್ಮರಣಿಯ ದಿನ ಎಂದ ಶಶಿ ತರೂರ್! ಆಕ್ರೋಶಕ್ಕೆ ಕಾರಣವಾಯ್ತು ಮೆಮೊರೇಬಲ್ ಡೇ ಪೋಸ್ಟ್

ನವದೆಹಲಿ: ಪ್ರವಾಹ ಮತ್ತು ಭೂಕುಸಿತಕ್ಕೆ ಸಿಲುಕಿ ಸಂತ್ರಸ್ತರಾಗಿರುವ ಕೇರಳದ ವಯನಾಡಿನ ಜನರ ಕಷ್ಟಕ್ಕೆ ದೇಶಾದ್ಯಂತ ಜನರು ಮಿಡಿಯುತ್ತಿದ್ದಾರೆ. ಎಲ್ಲೆಡೆಯಿಂದ ಸಂತೈಸುವಿಕೆಯ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಹಲವಾರು ಸೆಲೆಬ್ರೆಟಿಗಳು, ಸಂಘ - ಸಂಸ್ಥೆಗಳು ನೆರವಿನ ಹಸ್ತ ಚಾಚಿದ್ದಾರೆ. ಸಂತ್ರಸ್ತರಿಗೆ ಅವಶ್ಯವಿರುವ ಪರಿಹಾರ ಸಾಮಾಗ್ರಿಗಳು ಬೃಹತ್ ಪ್ರಮಾಣದಲ್ಲಿ ಹರಿದು ಬರುತ್ತಿದೆ.  ವಯನಾಡ್​​ ಜನರ ಪರಿಸ್ಥಿತಿ ನೋಡಿ ಅಯ್ಯೋ ಎನ್ನುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಎಕ್ಸ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ತಿರುವನಂತಪುರ ಸಂಸದ ಶಶಿ ತರೂರ್ ಅಲ್ಲಿನ ಸ್ಥಿತಿಗತಿಗಳನ್ನು ಅವಲೋಕಿಸಿ ಪರಿಹಾರ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸುವಲ್ಲಿ ಕೈಜೋಡಿಸಿದ್ದರು. ಅದರ ಪೋಟೋಗಳನ್ನು ಎಕ್ಸ್​ನಲ್ಲಿ ಹಂಚಿಕೊಂಡಿರುವ ಅವರು ವಯನಾಡಿನಲ್ಲಿನ ಸ್ಮರಣೀಯ ದಿನದ ಕೆಲವು ನೆನಪುಗಳು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್​ಗೆ ಈಗ ತೀವ್ರ ವಿರೋಧ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಸೇರಿದಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ಶಶಿ ತರೂರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರವಾಹ ಮತ್ತು ಭೂಕುಸಿತದಿಂದಾಗಿ ಅಲ್ಲಿನ ಜನರು ತೀವ್ರವಾದ ಹಾನಿ ಅನುಭವಿಸಿದ್ದಾರೆ. ಮುನ್ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಏರುತ್ತಲೇ ಇದೆ. ಅಂತಹ ಸ್ಥಳಕ್ಕೆ ಭೇಟಿ ನೀಡುವಾಗ ಅಲ್ಲಿನ ಜನರಿಗಾಗಿ ಹೃದಯ ಮಿಡಿಯಬೇಕಿತ್ತು. ಅದರ ಬದಲಾಗಿ ಶಶಿ ತರೂರ್​ ಅಲ್ಲಿಗೆ ಭೇಟಿ ನೀಡಿ ಸಹಾಯ ಮಾಡುವಂತೆ ಫೋಟೋಗಳಿಗೆ ಫೋಸ್ ನೀಡಿದ್ದಾರೆ ಮತ್ತು ಅದನ್ನು ಸ್ಮರಣಿಯ ನೆನಪುಗಳು ಎಂದು ಕರೆದುಕೊಂಡಿದ್ದಾರೆ. ಅಲ್ಲಿನ ಜನರ ಬದುಕು ದುಸ್ತರವಾಗಿರುವುದು ಸ್ಮರಣಿಯ ಘಟನೆಯಾಗಿದೆಯೇ ಎಂದು ಅನೇಕರು ಪ್ರತಿಕ್ರಿಯಿಸಿದ್ದು ಇದೊಂದು ಸೂಕ್ಷ್ಮಗ್ರಾಹಿಯಲ್ಲದ ಅಸಂವೇದನಿಯ ವರ್ತನೆ ಎಂದು ಟೀಕಿಸಿದ್ದಾರೆ.

ಸಾವು ಮತ್ತು ದುರಂತವು ಶಶಿ ತರೂರ್​ಗೆ ಸ್ಮರಣಿಯ ನೆನಪುಗಳಾಗಿವೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಕುಟುಕಿದ್ದಾರೆ. ಸ್ಮರಣಿಯ ಕ್ಷಣಗಳಿಗಾಗಿ ದರಂತ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಎಂದು ಇನ್ನೊಬ್ಬ ಎಕ್ಸ್ ಬಳಕೆದಾರರು ಬರೆದುಕೊಂಡಿದ್ದಾರೆ.

ಭಾಷಜ್ಞಾನ ಮತ್ತು ಅದನ್ನು ಎಲ್ಲಿ ಹೇಗೆ ಬಳಸಬೇಕೆನ್ನುವ ಪ್ರಜ್ಞೆ ಬೇರೆ ಬೇರೆಯಾಗಿದೆ. ಅದು ಇಂಗ್ಲಿಷ್ ಭಾಷಾ ಪ್ರವೀಣನೆಂದು ಕರೆಸಿಕೊಂಡಿರುವ ಶಶಿ ತರೂರ್​ಗೆ ಇರುವಂತಿಲ್ಲ ಎಂದು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.(ಏಜೆನ್ಸೀಸ್)

ತಮ್ಮ ಹೇಳಿಕೆಯನ್ನು ಇನ್ನೊಂದು ಪೋಸ್ಟ್ ಮೂಲಕ ಸಮರ್ಥಿಸಿಕೊಂಡಿರುವ ಶಶಿ ತರೂರ್ ಸ್ಮರಣಿಯವೆಂದರೆ ನೆನಪಿನಲ್ಲಿ ಉಳಿಯಲು ಯೋಗ್ಯವಾದ, ವಿಶೇಷವಾದ ಮತ್ತು ಮರೆಯಲಾಗದ ಎನ್ನುವ ಅರ್ಥವನ್ನು ನೀಡುತ್ತದೆ ಎಂದು ಹೇಳಿದ್ದಾರೆ.ಅದಕ್ಕೂ ಆಕ್ರೋಶ ವ್ಯಕ್ತಪಡಿಸಿರುವ ಸೋಶಿಯಲ್ ಮೀಡಿಯಾ ಬಳಕೆದಾರು ವಯನಾಡಿನ ಜನರು ಪ್ರವಾಹ ಮತ್ತು ಭೂಕುಸಿತದಿಂದ ಸಂತ್ರಸ್ತರಾಗಿರುವುದು ವಿಶೇಷವಾದ ಮತ್ತು ನೆನಪಿನಲ್ಲುಳಿಯಬೇಕಾದ ಘಟನೆಯೇ ಎಂದು ಪ್ರಶ್ನಿಸಿ ಶಶಿ ತರೂರ್ ಇಷ್ಟು ಸಂವೇದನಾ ರಹಿತರಾಗಬಾರದಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ.