ನವದೆಹಲಿ: ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಶಶಿ ತರೂರ್, ಅದಕ್ಕಾಗಿ ಹೊರಡಿಸಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಭಾರತವನ್ನೇ ತಪ್ಪಾಗಿ ತೋರಿಸಿದ್ದಾರೆ. ಅರ್ಥಾತ್, ಜಮ್ಮು-ಕಾಶ್ಮೀರವೇ ಇರದಂಥ ಭಾರತದ ನಕಾಶೆಯನ್ನು ಪ್ರಣಾಳಿಕೆಯಲ್ಲಿ ತೋರಲಾಗಿದ್ದು, ಅದೀಗ ವಿವಾದಕ್ಕೀಡಾಗಿದೆ.
ಶಶಿ ತರೂರ್ ಕಡೆಯಿಂದ ಪ್ರಕಟಿತ ಪ್ರಣಾಳಿಕೆಯಲ್ಲಿ ಭಾರತದ ನಕಾಶೆಯಲ್ಲಿ ಜಮ್ಮ-ಕಾಶ್ಮೀರ ಮತ್ತು ಲಡಾಖ್ ಇರಲಿಲ್ಲ. ಇದು ದೊಡ್ಡ ವಿವಾದಕ್ಕೆ ಒಳಗಾಗುತ್ತಿದ್ದಂತೆ ಎಚ್ಚೆತ್ತುಕೊಂಡ ತರೂರ್ ಕಚೇರಿಯವರು ಬಳಿಕ ಪರಿಷ್ಕೃತ ಪ್ರಣಾಳಿಕೆ ಹೊರಡಿಸಿ ತಪ್ಪಿನಿಂದಾದ ಹಾನಿ ಕಡಿಮೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ತರೂರ್ ಪ್ರಣಾಳಿಕೆಯಲ್ಲಿನ ಈ ತಪ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅತ್ತ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದರೆ ಇತ್ತ ಶಶಿ ತರೂರ್ ಪ್ರಣಾಳಿಕೆಯಲ್ಲಿನ ಭಾರತ ನಕಾಶೆಯಲ್ಲಿ ಲಡಾಖ್ ಮತ್ತು ಜಮ್ಮು-ಕಾಶ್ಮೀರವೇ ಇಲ್ಲ ಎಂಬುದಾಗಿ ಟೀಕಿಸಿದ್ದಾರೆ.