ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರ ನಡುವಿನ ದೂರವಾಣಿ ಮಾತುಕತೆಯ ಬಳಿಕ ಚೀನಾ ಗಲ್ವಾನ್ ಕಣಿವೆಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ವಿವಾದಿತ ಸ್ಥಳಗಳಾದ ಗಲ್ವಾನ್, ಹಾಟ್ಸ್ಟ್ರಿಂಗ್ಸ್ ಮತ್ತು ಗೋಗ್ರಾ ನೆಲೆಗಳಿಂದ ಚೀನಾ ಸೈನಿಕರು 1.5ಕಿ.ಮೀ.ಹಿಂದಕ್ಕೆ ಸರಿದಿವೆ. ಅದಕ್ಕೆ ಪ್ರತಿಯಾಗಿ ಭಾರತದ ಯೋಧರೂ ಕೂಡ ಗಲ್ವಾನ್ ಕಣಿವೆಯಿಂದ ವಾಪಸ್ ಬರುತ್ತಿವೆ.
ಜೂ.15ರಂದು ಗಲ್ವಾನ್ನಲ್ಲಿ ನಡೆದ ಸಂಘರ್ಷದ ಬಳಿಕ ಎರಡೂ ದೇಶಗಳ ಸೈನಿಕರು ಅಪಾರ ಸಂಖ್ಯೆಯಲ್ಲಿ ಎಲ್ಎಸಿ ಬಳಿ ಬೀಡುಬಿಟ್ಟಿದ್ದವು. ಆದರೆ ಈ ಮಹತ್ವದ ಬೆಳವಣಿಗೆಯೂ ಕಾಂಗ್ರೆಸ್ಗೆ ಖುಷಿ ಕೊಡಲಿಲ್ಲ. ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್ ಶಶಿ ತರೂರ್ ಮತ್ತು ರಣದೀಪ್ ಸುರ್ಜೇವಾಲಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನೆ ಮಾಡಿದ್ದಾರೆ.
2013ರಲ್ಲಿ ಯುಪಿಎ ಸರ್ಕಾರದ ಆಡಳಿತ ಇದ್ದಾಗಲೂ ಲಡಾಖ್ನ ದೇಪ್ಸಾಂಗ್ ಕಣಿವೆಯಲ್ಲಿ ಚೀನಾ ಕ್ಯಾತೆ ತೆಗೆದಿತ್ತು. ಚೀನಾ ಸೈನಿಕರು ಭಾರತದ ಭೂಪ್ರದೇಶದೊಳಗೆ ಸುಮಾರು 10 ಕಿ.ಮೀ ದೂರ ಪ್ರವೇಶ ಮಾಡಿ, ಟೆಂಟ್ಗಳನ್ನು ಹಾಕಿ ಬೀಡುಬಿಟ್ಟಿದ್ದರು. ಅವರನ್ನು ಎದುರಿಸಲು ಭಾರತೀಯ ಸೈನಿಕರೂ ಸಿದ್ಧರಾಗಿ ಅದೇ ಸ್ಥಳದಲ್ಲಿ ಜಮಾವಣೆಗೊಂಡಿದ್ದರು. ನಂತರ ಸತತ ಮಾತುಕತೆ ಬಳಿಕ ಚೀನಾ ಸೈನಿಕರು ದೇಪ್ಸಾಂಗ್ನಿಂದ ಹೊರಹೋಗಿದ್ದರು. ಈ ಬಗ್ಗೆ ಅಂದಿನ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರರಾಗಿದ್ದ ಸೈಯದ್ ಅಕ್ಬರುದ್ದೀನ್ ಅವರು ಹೇಳಿಕೆ ಬಿಡುಗಡೆ ಮಾಡಿ, ಚೀನಾ ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿದೆ. ಅದರಂತೆ ಭಾರತೀಯ ಸೈನಿಕರೂ ವಾಪಸ್ ಬರಲಿದ್ದಾರೆ ಎಂದಿದ್ದರು. ಅವರ ಹೇಳಿಕೆಗೆ ಪ್ರತಿಯಾಗಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಟ್ವೀಟ್ವೊಂದನ್ನು ಮಾಡಿದ್ದರು. ಚೀನಾ ಅದರ ಸೇನಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುತ್ತಿದೆ ಒಪ್ಪಿಕೊಳ್ಳೋಣ. ಆದರೆ ಭಾರತದ ಭೂಪ್ರದೇಶದಿಂದ ಭಾರತವೂ ಏಕೆ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದೆ? ನಾವೇಕೆ ಹಿಂದೆ ಸರಿಯಬೇಕು? ಈ ನಡೆಯ ಬಗ್ಗೆ ನನಗೆ ಆಶ್ಚರ್ಯವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ವೇತನ ತಾರತಮ್ಯ ಸರಿಪಡಿಸಲು ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಶುಶ್ರೂಷಕರ ಪ್ರತಿಭಟನೆ
ಇದೀಗ 2013ರಲ್ಲಿ ನರೇಂದ್ರ ಮೋದಿಯವರು ಮಾಡಿದ್ದ ಟ್ವೀಟ್ನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿರುವ ಶಶಿ ತರೂರ್ ಮತ್ತು ರಣದೀಪ್ ಸರ್ಜೇವಾಲಾ ನರೇಂದ್ರ ಮೋದಿಯವರನ್ನು ಟೀಕಾತ್ಮಕವಾಗಿ ಪ್ರಶ್ನಿಸಿದ್ದಾರೆ.
ನಾನು ನರೇಂದ್ರ ಮೋದಿಯವರ ಈ ಪ್ರಶ್ನೆಯ ಪರವಾಗಿ ನಾನು ನಿಲ್ಲುತ್ತೇನೆ. ಅಂದು ಅವರು ಕೇಳಿದ್ದ ಈ ಪ್ರಶ್ನೆಗೆ ಇಂದು ಪ್ರಧಾನಿಯವರೇ ಉತ್ತರಿಸಬೇಕು ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಗಲ್ವಾನ್ ಕಣಿವೆಯಲ್ಲಿ ಪಿಪಿ 14ರವರೆಗೆ ಗಸ್ತು, ಭಾರತೀಯ ಯೋಧರ ಘೋಷಣೆ
ಹಾಗೇ ರಣದೀಪ್ ಸಿಂಗ್ ಸರ್ಜೇವಾಲಾ ಟ್ವೀಟ್ ಮಾಡಿ, ಗೌರವಾನ್ವಿತ ಪ್ರಧಾನಿಯವರೇ, ಅಂದು ನೀವಾಡಿದ ಮಾತುಗಳು ನಿಮಗೆ ನೆನಪಿದೆಯೇ? ಆ ಮಾತುಗಳಿಗೆ ಬೆಲೆ ಇದೆಯಾ? ಇವತ್ತು ಯಾಕೆ ಭಾರತದ ಸೈನಿಕರು ಭಾರತದ ಭೂಪ್ರದೇಶದಿಂದ ಹಿಂದೆ ಸರಿದಿದ್ದಾರೆ. ಚೀನಾ ಗಲ್ವಾನ್ನಿಂದ ವಾಪಸ್ ಹೋಗುವುದು ಸರಿ, ಆದರೆ ಭಾರತೀಯ ಸೈನಿಕರು ಯಾಕೆ ವಾಪಸ್ ಬರಬೇಕು? ಈ ಪ್ರಶ್ನೆಗೆ ಇಡೀ ದೇಶ ಉತ್ತರ ಬಯಸುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)