ನವದೆಹಲಿ: ಕಾಂಗ್ರೆಸ್ ನಾಯಕತ್ವದೊಂದಿಗಿನ ತನ್ನ ಭಿನ್ನಾಭಿಪ್ರಾಯದ ವದಂತಿಗಳ ನಡುವೆ ಸಂಸದ ಶಶಿ ತರೂರ್(Shashi Tharoor) ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಜತೆಗಿನ ಸೆಲ್ಫಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಈ ಪೋಸ್ಟ್ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಇದನ್ನು ಓದಿ: ಪಿಎಂಗೆ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಶಕ್ತಿಕಾಂತ್ ದಾಸ್ ನೇಮಕ; ಈ ಹುದ್ದೆಯ ಕಾರ್ಯವೇನು? PM Principal Secretary
ಕೇರಳದಲ್ಲಿ ಆಡಳಿತಾರೂಢ ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಸರ್ಕಾರದ ನೀತಿಗಳನ್ನು ಶ್ಲಾಘಿಸಿದ ನಂತರ ಶಶಿ ತರೂರ್ ಅವರ ಕಾಂಗ್ರೆಸ್ ಜತೆಗಿನ ಸಂಬಂಧ ಹದಗೆಟ್ಟಿದೆ. ಈ ಮಧ್ಯೆ ಬಿಜೆಪಿ ಸಚಿವರೊಂದಿಗಿನ ಫೋಟೋ ಹಂಚಿಕೊಂಡಿರುವುದು ಹರಿದಾಡುತ್ತಿರುವ ವದಂತಿಗೆ ಪುಷ್ಠಿ ನೀಡಿದಂತಾಗಿದೆ.
ಇತ್ತೀಚೆಗೆ ಶಶಿ ತರೂರ್ ಅವರು ಪಕ್ಷದ ನಾಯಕತ್ವವನ್ನು ನೇರವಾಗಿ ಪ್ರಶ್ನಿಸಿದ್ದರು. ಅವರಿಗೆ ಯಾವ ಜವಾಬ್ದಾರಿ ಇದೆ ಎಂದು ಕೇಳಿದ್ದರು. ಇದಲ್ಲದೆ ಪಕ್ಷಕ್ಕೆ ಯಾವುದೇ ಕೆಲಸವಿಲ್ಲದಿದ್ದರೆ, ತನಗೆ ಆಯ್ಕೆಗಳೂ ಇವೆ ಎಂದು ಅವರು ಹೇಳಿದ್ದರು. ಈಗ ಅವರು ಜಾಲತಾಣದಲ್ಲಿನ ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋ ಚರ್ಚೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿದೆ. ಎಡಪಂಥೀಯ ಸರ್ಕಾರದ ಅಡಿಯಲ್ಲಿ ರಾಜ್ಯದ ಅಭಿವೃದ್ಧಿಯನ್ನು ಶ್ಲಾಘಿಸಿದ್ದಕ್ಕಾಗಿ ಶಶಿ ತರೂರ್ ಅವರನ್ನು ಟೀಕಿಸಲಾಯಿತು. ವಾಸ್ತವವಾಗಿ ತರೂರ್ ರಾಜ್ಯದ ಅಭಿವೃದ್ಧಿಯ ಕೆಲವು ಅಂಶಗಳ ಬಗ್ಗೆ ಸಕಾರಾತ್ಮಕ ವಿಷಯಗಳನ್ನು ಹೇಳಿದ್ದರು. ಅದೇ ಸಮಯದಲ್ಲಿ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯನ್ನು ಶಶಿ ತರೂರ್ ಶ್ಲಾಘಿಸಿದ್ದರು. ಆದರೆ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅಮೆರಿಕದಲ್ಲಿ ಭಾರತದ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು. ಜತೆಗೆ ಅಲ್ಲಿಯೂ ಅವರು ಅದಾನಿಯನ್ನು ಮಾತ್ರ ಸಮರ್ಥಿಸಿಕೊಳ್ಳುತ್ತಲೇ ಇದ್ದರು ಎಂದು ಟೀಕಿಸಿದ್ದರು.
ಅಂತಹ ಪರಿಸ್ಥಿತಿಯಲ್ಲಿ ಶಶಿ ತರೂರ್ ಅವರ ಪ್ರಶಂಸೆ ಸ್ವಲ್ಪ ಭಿನ್ನವಾಗಿತ್ತು. ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದನ್ನು ಸಹ ಟೀಕಿಸಲಾಯಿತು. ಪ್ರಧಾನಿ ಮೋದಿ ಅವರನ್ನು ತಮಗಿಂತ ಉತ್ತಮ ಸಂಧಾನಕಾರ ಎಂದು ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದರೆ, ಅದು ಸಂತೋಷದ ವಿಷಯ ಎಂದು ಅವರು ಹೇಳಿದ್ದರು. ಈ ಬಗ್ಗೆ ಕೇಳಿದಾಗ, ಶಶಿ ತರೂರ್ ಅವರು ಇದರಲ್ಲಿ ಯಾವುದೇ ತಪ್ಪಿಲ್ಲ, ಪಕ್ಷದ ಹಿತಾಸಕ್ತಿಗಳನ್ನು ಮೀರಿ ಕೆಲವೊಮ್ಮೆ ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಮಾತನಾಡಬಹುದು ಎಂದು ಹೇಳಿದ್ದರು.
ಈಗ ಶಶಿ ತರೂರ್ ಹಂಚಿಕೊಂಡ ಸೆಲ್ಫಿಯಲ್ಲಿ, ಪಿಯೂಷ್ ಗೋಯಲ್ ಮತ್ತು ಯುಕೆ ವಾಣಿಜ್ಯ ಸಚಿವ ಜೊನಾಥನ್ ರೆನಾಲ್ಡ್ಸ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನ ಭಾರತ ಮತ್ತು ಯುಕೆ ನಡುವಿನ ವ್ಯಾಪಾರ ಒಪ್ಪಂದದ ನಂತರ ತೆಗೆದುಕೊಳ್ಳಲಾಗಿದೆ ಎಂದು ಶಶಿ ತರೂರ್ ತಿಳಿಸಿದ್ದಾರೆ. ಬ್ರಿಟಿಷ್ ಸಚಿವ ಜೊನಾಥನ್ ರೆನಾಲ್ಡ್ಸ್ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಸಲಾಯಿತು ಎಂದು ತರೂರ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಅವರೊಂದಿಗೆ ಅವರು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನೂ ಭೇಟಿಯಾಗಿದ್ದಾರೆ.
ವಾಸ್ತವವಾಗಿ, ಶಶಿ ತರೂರ್ ಅವರು ರಾಜ್ಯದ ಸಿಪಿಎಂ ಸರ್ಕಾರವನ್ನು ಹೊಗಳಿದ್ದಾರೆ, ಅದರ ವಿರುದ್ಧ ಕಾಂಗ್ರೆಸ್ ರಾಜ್ಯದಲ್ಲಿ ದೀರ್ಘಕಾಲದಿಂದ ಹೋರಾಡುತ್ತಿದೆ. ಸದ್ಯ ಈ ಪೋಸ್ಟ್ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದ್ದು, ಕೆಲವರು ಶಶಿ ತರೂರ್ ಸಿಪಿಎಂ ಸೇರಬಹುದು ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಅವರು ಬಿಜೆಪಿ ಸೇರುತ್ತಾರೆ ಎಂದು ಊಹಿಸುತ್ತಿದ್ದಾರೆ.(ಏಜೆನ್ಸೀಸ್)