ನ್ಯೂಸ್

35 ಲಕ್ಷ ಮೌಲ್ಯದ ಚಿನ್ನ ಕಳ್ಳಸಾಗಣೆ: ಶಶಿ ತರೂರ್ ಆಪ್ತ ಸಹಾಯಕ ವಿಮಾನ ನಿಲ್ದಾಣದಲ್ಲಿ ಬಂಧನ!

ನವದೆಹಲಿ: ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ಕಾಂಗ್ರೆಸ್​ ಮುಖಂಡ ಮಾಜಿ ಸಂಸದ ಶಶಿ ತರೂರ್ ಅವರ ಮಾಜಿ ಆಪ್ತ ಸಹಾಯಕನನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಘಟನೆ ಗುರುವಾರ (ಮೇ.30) ನಡೆದಿದೆ.

ಶಶಿ ತರೂರ್ ಅವರ ಮಾಜಿ ಸಿಬ್ಬಂದಿಯನ್ನು ಐಜಿಐ ವಿಮಾನ ನಿಲ್ದಾಣದಲ್ಲಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಾಣೆ ಮಾಡಲು ಯತ್ನಿಸುತ್ತಿರುವ ವೇಳೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತರೂರ್ ಅವರ ಮಾಜಿ ಸಿಬ್ಬಂದಿ ಶಿವಪ್ರಸಾದ್ ಬಳಿ 500 ಗ್ರಾಂ ಚಿನ್ನ ಇದ್ದಿರುವುದು ತಪಾಸಣೆ ವೇಳೆ ಪತ್ತೆಯಾಗಿದೆ. ವಿಚಾರಣೆಯ ಸಮಯದಲ್ಲಿ, ಅವರು ಬೆಲೆಬಾಳುವ ಲೋಹವನ್ನು ಏಕೆ ಸಾಗಿಸುತ್ತಿದ್ದಾರೆ ಎಂಬುದಕ್ಕೆ ಸರಿಯಾದ ಉತ್ತರ ನೀಡಿಲ್ಲ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಾಕ್​ನಿಂದ ಇಲ್ಲಿಗೆ ಆಗಮಿಸಿದ್ದ ವ್ಯಕ್ತಿ ಹಾಗೂ ತರೂರ್​ ಆಪ್ತ ಸಹಾಯಕನನ್ನು ಬಂಧಿಸಿದ್ದಾರೆ, ಇವರಿಬ್ಬರ ವಿರುದ್ಧ ಚಿನ್ನಕಳ್ಳಸಾಗಾಣೆ ಪ್ರಕರಣ ದಾಖಲಿಸಿರುವುದಾಗಿ ವರದಿ ತಿಳಿಸಿದೆ.

ಚಿನ್ನ ಕಳ್ಳಸಾಗಾಣೆ ಸುದ್ದಿ ಕೇಳಿ ಅಘಾತವಾಗಿದೆ: ನಾನು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು ವಿಷಯ ತಿಳಿದು ಅಘಾತವಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಸಾದ್​ ನಿವೃತ್ತಿಯಾಗಿದ್ದು, 72 ವರ್ಷ ವರ್ಷವಾಗಿದ್ದು ಆಗಾಗ ಡಯಾಲಿಸಿಸ್​ ಮಾಡಿಕೊಳ್ಳುತ್ತಿದ್ದುದರಿಂದ ಸಹಾನೂಭೂತಿಯಿಂದ ಅವರನ್ನು ಗುತ್ತಿಗೆ ಆಧಾರದ ಮೇಲೆ ಕೆಲಸದಲ್ಲಿ ಉಳಿಸಿಕೊಳ್ಳಲಾಗಿತ್ತು. ನಾನು ಯಾವುದೇ ತಪ್ಪನ್ನು ಕ್ಷಮಿಸುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಕಾಂಗ್ರೆಸ್​ ಹಿರಿಯ ನಾಯಕ ಶಶಿ ತರೂರ್ ಹೇಳಿದ್ದಾರೆ.

‘ಮಾಜಿ ಕೇಂದ್ರ ಸಚಿವರಾಗಿದ್ದ ಶಶಿ ತರೂರ್ ಅವರು ಪ್ರಸ್ತುತ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.