ನವದೆಹಲಿ: ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಉಪಪ್ರಧಾನಿ ಎಲ್.ಕೆಅಡ್ವಾಣಿಯವರ 98ನೇ ಹುಟ್ಟು ಹಬ್ಬಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಎಕ್ಸ್ ಖಾತೆಯಲ್ಲಿ ಶುಭಾಶಯ ಕೋರಿದ್ದಾರೆ. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರಿಗೆ ಪ್ರತಿಕ್ರಿಯಿಸಿರುವ ಅವರು, ಕೇವಲ ಒಂದೇ ಕಾರಣಕ್ಕೆ ಅವರ ಸೇವೆಯನ್ನು ಅಲ್ಲಗೆಳೆಯಬಾರದು ಎಂದಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿ ಶುಭಾಶಯ ಕೋರಿದ್ದ ಶಶಿ ತರೂರ್, ಹುಟ್ಟುಹಬ್ಬದ ಪೋಸ್ಟ್‌ನಲ್ಲಿ ಅಡ್ವಾಣಿ ಅವರನ್ನು ಭೇಟಿಯಾದಾಗ ತೆಗೆದ ಹಳೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆಧುನಿಕ ಭಾರತದ ಪ್ರಯಾಣದಲ್ಲಿ ಅಡ್ವಾಣಿ ಅವರ ಸೇವೆಗಳು ಶ್ಲಾಘನೀಯ. ಸಾರ್ವಜನಿಕ ಸೇವೆ, ನಮ್ರತೆ ಮತ್ತು ಸೌಜನ್ಯಕ್ಕೆ ಅವರ ಅಚಲ ಬದ್ಧತೆ ಶ್ಲಾಘನೀಯ ಎಂದು ಬರೆದಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್ ಹಿರಿಯ ವಕೀಲ ಸಂಜಯ್ ಹೆಗ್ಡೆ, ಅಡ್ವಾಣಿಯವರ ಬಗ್ಗೆ ಈ ಹಿಂದೆ ಬರಹಗಾರ-ಪತ್ರಕರ್ತ ಖುಷ್ವಂತ್ ಸಿಂಗ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿ, ದ್ವೇಷದ ಬೀಜಗಳನ್ನು ಬಿತ್ತುವುದು ಸಾರ್ವಜನಿಕ ಸೇವೆಯಲ್ಲ ಎಂದಿದ್ದರು.
ರಾಮ ಜನ್ಮಭೂಮಿ ಚಳುವಳಿಗೆ ಬೆಂಬಲವಾಗಿ ಜನರನ್ನು ಸಜ್ಜುಗೊಳಿಸಲು ಅಡ್ವಾಣಿ ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗೆ ರಥಯಾತ್ರೆ ನಡೆಸಿದ್ದರು. ಇದು ಮುಂದೆ 1992ರ ಡಿಸೆಂಬರ್ನಲ್ಲಿ ಉತ್ತರ ಪ್ರದೇಶದಲ್ಲಿ ಬಾಬರಿ ಮಸೀದಿ ಧ್ವಂಸಕ್ಕೆ ಕಾರಣ ಎನ್ನಲಾಗಿತ್ತು. ಕಾಂಗ್ರೆಸ್ ಸಹ ರಥಯಾತ್ರೆ ವಿಚಾರವಾಗಿ ಅಡ್ವಾಣಿಯವರನ್ನು ಟೀಕಿಸಿತ್ತು.
ಸಂಜಯ್ ಹೆಗ್ಡೆಯವರ ಟ್ವೀಟ್ಗೆ ರಿಟ್ವೀಟ್ ಮಾಡಿರುವ ತರೂರ್, ಕೇವಲ ಒಂದು ಘಟನೆಯಿಂದ ಅವರ ಸುದೀರ್ಘ ಸಾರ್ವಜನಿಕ ಸೇವೆಯನ್ನು ಕಡಿಮೆ ಮಾಡುವುದು ಅನ್ಯಾಯ. ಚೀನಾದ ದಾಳಿಯಿಂದ ನೆಹರೂ ಅವರನ್ನು ಅಥವಾ ತುರ್ತು ಪರಿಸ್ಥಿತಿಯಿಂದ ಇಂದಿರಾ ಗಾಂಧಿಯವರ ಸಾಧನೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲದಂತೆಯೇ, ಅಡ್ವಾಣಿಯವರ ವಿಷಯದಲ್ಲೂ ಇದು ನಿಜ ಎಂದು ಹೇಳಿದ್ದಾರೆ. (ಏಜೆನ್ಸೀಸ್)