ಹೊಳೆಆಲೂರ: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಖಜೂರಿಯ ಮುರುಘೕಂದ್ರ ಕೋರಣೇಶ್ವರ ಸ್ವಾಮಿಗಳು ಸ್ಥಾಪಿಸಿರುವ ಲಿಂಗಾಯತ ಸಮುದಾಯದ ಕೋರಣೇಶ್ವರ ಶಾಂತಿಧಾಮಕ್ಕೆ ಅಸೂಟಿ ಗ್ರಾಮದ ದಿವಾನ ಶರೀಫ ಅವರನ್ನು ಪೀಠಾಧಿಪತಿಗಳನ್ನಾಗಿ ನೇಮಿಸಲಾಗಿದೆ. ಫೆ.26ರಂದು ಶಾಂತಿಧಾಮದ ಪ್ರಥಮ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಹಾಗೂ ಧಾರ್ವಿುಕ ಕಾರ್ಯಕ್ರಮದಲ್ಲಿ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಪೀಠಾರೋಹಣ ಮಾಡುವರು.
ಖಜೂರಿ ಹಾಗೂ ನಮ್ಮ ಮಠದ ಒಡೆತನದ ಶಾಲೆ, ಸಂಘ- ಸಂಸ್ಥೆಗಳಲ್ಲಿ ಎಲ್ಲರಿಗೂ ಸಮಾನತೆ ನೀಡಲಾಗಿದೆ. 2019ರ ಡಿ. 10ರಂದು ದಿವಾನ ಶರೀಫಗೆ ಅವರ ಆಶಯ ಹಾಗೂ ಕುಟುಂಬದ ಒಪ್ಪಿಗೆ ಮೇರೆಗೆ ಲಿಂಗ ದೀಕ್ಷೆ ನೀಡಲಾಗಿದೆ. 3ನೇ ತರಗತಿ ಓದಿರುವ ಅವರಿಗೆ ಪೂಜೆ, ಆಚಾರ ವಿಚಾರ ಮಾತ್ರ ಬೋಧಿಸಲಾಗಿದ್ದು ಮುಂಬರುವ ದಿನಗಳಲ್ಲಿ ಲಿಂಗಾಯತ ಧರ್ಮದ ತತ್ತ್ವ, ಚಿಂತನೆ ಬಗ್ಗೆ ಕಲಿಸಲಾಗುತ್ತದೆ ಎಂದು ಮುರುಘೕಂದ್ರ ಕೋರಣೇಶ್ವರ ಶ್ರೀಗಳು ತಿಳಿಸಿದ್ದಾರೆ.