ಸೊರಬ: ತಾಲೂಕಿನ ಪ್ರತಿ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಚಂದ್ರಗುತ್ತಿ ಹೋಬಳಿಯ ನ್ಯಾರ್ಸಿ ಹಾಗೂ ಹರೀಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬರದವಳ್ಳಿ ಗ್ರಾಮದಲ್ಲಿ 10 ಲಕ್ಷ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ, ಯಡಗೊಪ್ಪದಲ್ಲಿ 22 ಲಕ್ಷ ರೂ. ವೆಚ್ಚದ ಕಾಲುಸಂಕ, ಹರೀಶಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಯಡಗೊಪ್ಪದಲ್ಲಿ ಜಲಜೀವನ್ ಮಿಷನ್ ಅಡಿ 92 ಮನೆಗಳಿಗಳಿಗೆ ನಲ್ಲಿ ಸಂಪರ್ಕ ಕಾಮಗಾರಿ ಉದ್ಘಾಟನೆ ನೆರವೇರಿಸಿದರು.
ತಾಲೂಕಿನ 354 ಗ್ರಾಮಗಳಿಗೆ 650 ಕೋಟಿ ರೂ. ವೆಚ್ಚದಲ್ಲಿ ಶರಾವತಿ ಹಿನ್ನೀರಿನಿಂದ ಶಾಶ್ವತ ಕುಡಿಯುವ ನೀರನ್ನು ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಪ್ರತಿ ಗ್ರಾಮಗಳಿಗೂ ಗುಣಮಟ್ಟದ ಸಂಪರ್ಕ ರಸ್ತೆಗಳು, ಶಾಲಾ ಕೊಠಡಿ ಮತ್ತು ಸಮುದಾಯ ಭವನಗಳನ್ನು ಮುಂದಿನ ಎರಡು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಶೀಘ್ರದಲ್ಲಿ ಶಿಕ್ಷಕರ ಹುದ್ದೆಗೆ ಭರ್ತಿ ಮಾಡಲಾಗುವುದು ಎಂದರು.
ಅಗತ್ಯವಿದ್ದ ಗ್ರಾಮಗಳ ಬೇಡಿಕೆಗೆ ಅನುಗುಣವಾಗಿ ಶಾಲಾ ಕೊಠಡಿಗೆ ಅನುದಾನ ಬಿಡುಗಡೆಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಮುಂಬರುವ ಜನವರಿಯಲ್ಲಿ ತಾಲೂಕಿನ ಪ್ರತಿ ಗ್ರಾಮಗಳಿಗೆ ಭೇಟಿನೀಡಿ ಗ್ರಾಮಸ್ಥರ ಜತೆಗೆ ಬೇಕಾದ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ನ್ಯಾರ್ಸಿ ಗ್ರಾಪಂ ಅಧ್ಯಕ್ಷ ಧನಂಜಯ ನಾಯ್ಕ, ಉಪಾಧ್ಯಕ್ಷೆ ಕಾಮಾಕ್ಷಿ ಅಣ್ಣಪ್ಪ, ಪ್ರಮುಖರಾದ ಎಚ್.ಗಣಪತಿ, ತಬಲಿ ಬಂಗಾರಪ್ಪ, ಜಯಶೀಲ ಗೌಡ, ಎನ್.ಜಿ.ನಾಗರಾಜ್, ಡಿ.ಬಿ.ಅಣ್ಣಪ್ಪ, ಟಿ.ಜಿ.ಗಣಪತಿ, ಹಿರಣ್ಯಪ್ಪ ಕಲ್ಲಂಬಿ, ಉಮಾಪತಿ, ರಾಜಪ್ಪ, ನಾರಾಯಣಪ್ಪ, ರವಿ, ಷಣ್ಮುಖ, ಗಾಮಪ್ಪ, ಈಶ್ವರ್, ಗ್ರಾಪಂ ಸದಸ್ಯರಾದ ಸರೋಜಾ, ನಾಗಮ್ಮ, ಕವಿತಾ, ನೀರಾವರಿ ನಿಗಮದ ಎಇಇ ಮಂಜುನಾಥ್, ಗುರುರಾಜ್, ಪರಶುರಾಮಪ್ಪ, ಎಇಇ ಯಶೋಧರ್, ಬಿಇಒ ಪುಷ್ಪಾ ಇತರರಿದ್ದರು.