ನ್ಯೂಸ್

ಶರಾವತಿ ಹಿನ್ನೀರಿನ ಮಧ್ಯೆ ಸಿಲುಕಿದ್ದ ಹಸಿರುಮಕ್ಕಿ ಲಾಂಚ್​, 50 ಜನರು ದಡ ಸೇರಿದ್ದೇ ಪವಾಡ!

arunakunigal

ಶಿವಮೊಗ್ಗ: ರಾಜ್ಯಾದ್ಯಂತ ವರುಣಾಘಾತ ಸಂಭವಿಸುತ್ತಿದೆ. ಈ ನಡುವೆ ಬಿರುಗಾಳಿ ಸಹಿತ ಮಳೆಯಿಂದಾಗಿ ಶರಾವತಿ ಹಿನ್ನೀರಿನ ಮಧ್ಯೆ 50 ಪ್ರಯಾಣಿಕರಿದ್ದ ಹಸಿರುಮಕ್ಕಿ ಲಾಂಚ್ ಸಿಲುಕಿಕೊಂಡು ಆತಂಕ ಸೃಷ್ಟಿಸಿತ್ತು.

ಸಾಗರ ತಾಲೂಕಿನ ಹುಲಿದೇವರ ಬನದ ಬಳಿಯ ಹಿನ್ನೀರಿನ‌ ದಡದಿಂದ ಹೊಸನಗರ ತಾಲೂಕಿನ ಕೆ.ಬಿ.ಕ್ರಾಸ್ ಬಳಿಯ ದಡಕ್ಕೆ‌ ಸಂಪರ್ಕ ಕಲ್ಪಿಸುವ ಹಸಿರುಮಕ್ಕಿ ಲಾಂಚ್ ಗುರುವಾರ ಗಾಳಿ-‌ಮಳೆಯಿಂದಾಗಿ ಶರಾವತಿ ಹಿನ್ನೀರಿನ ಮಧ್ಯೆ 2 ಗಂಟೆ ಕಾಲ ಸಿಲುಕಿಕೊಂಡಿತ್ತು. ಲಾಂಚ್‌ ನಡುನೀರಿನಲ್ಲಿ ಸಿಲುಕಿಕೊಂಡಾಗ ತೆಪ್ಪದ ಮೂಲಕ ತೆರಳಿ ಲಾಂಚನ್ನು ಸಮೀಪದಲ್ಲೇ ಇದ್ದ ಪಿಲ್ಲರ್​ಗೆ ಕಟ್ಟಲಾಯ್ತು. ಬಳಿಕ ಲಾಂಚನ್ನು ದಡಕ್ಕೆ ತರಲು ಕ್ರೇನ್ ತರಿಸಲು ಕ್ರಮ ಕೈಗೊಳ್ಳಲಾಗಿತ್ತು.

ಇನ್ನೇನು ಕ್ರೇನ್​ ಮೂಲಕ ಲಾಂಚ್ ಅನ್ನು ದಡಕ್ಕೆ ಸೇರಿಸುವ ಕಾರ್ಯಾಚರಣೆ ಆರಂಭಿಸಬೇಕು ಅನ್ನುವ ವೇಳೆಗಾಗಲೇ‌ ಗಾಳಿಯ ಆರ್ಭಟ ತುಸು ಕಮ್ಮಿಯಾಗಿದ್ದರಿಂದ

ಚಾಲಕನು ಲಾಂಚನ್ನು‌ ನಿಧಾನವಾಗಿ ದಡಕ್ಕೆ ಸೇರಿಸುವ ಮೂಲಕ ಲಾಂಚ್​ನಲ್ಲಿದ್ದ 50 ಪ್ರಯಾಣಿಕರನ್ನು ರಕ್ಷಿಸಿದರು. ಲಾಂಚ್‌ ದಡ ಸೇರುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

ಗುರುವಾರ ಬೆಳ್ಳಂಬೆಳಗ್ಗೆಯೇ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ತಪ್ಪಲಲ್ಲಿ ಭೂಕುಸಿತ ಸಂಭವಿಸಿರುವ ಸುದ್ದಿ ರಾಜ್ಯಕ್ಕೆ ಆಘಾತ ತಂದೊಡ್ಡಿದೆ. ಭೂಕುಸಿತದಿಂದಾಗಿ ಎರಡು ಮನೆಗಳು ಮಣ್ಣುಪಾಲಾಗಿದ್ದು, ತಲಕಾವೇರಿ ಕ್ಷೇತ್ರದ ಪ್ರಧಾನ ಅಚ೯ಕ ಟಿ.ಎಸ್.ನಾರಾಯಣ ಸೇರಿ ಐವರು ನಾಪತ್ತೆಯಾಗಿದ್ದು, 20ಕ್ಕೂ ಹೆಚ್ಚು ಹಸುಗಳು ಮಣ್ಣುಪಾಲಾಗಿವೆ. ಮಣ್ಣಿನಡಿ ಸಿಲುಕಿದವರ ರಕ್ಷಣಾಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ. ಈ ನಡುವೆ ಹಸಿರುಮಕ್ಕಿ ಲಾಂಚ್​ ಹಿನ್ನೀರಿನಲ್ಲಿ ಸಿಲುಕಿ ಮತ್ತಷ್ಟು ಆತಂಕ ಸೃಷ್ಟಿಸಿತ್ತು.