ನ್ಯೂಸ್

ಶರನ್ನವರಾತ್ರಿ ವೈಭವ’ ಶನಿವಾರ ಸಂಪನ್ನ


ದಸರಾ ಮಹೋತ್ಸವದ ಅಂಗವಾಗಿ ಸ್ವರ್ಣನೃಸಿಂಹ ದತ್ತ ಸಾಯಿ ಪೀಠಿಕ ಸೇವಾ ಟ್ರಸ್ಟ್ ವತಿಯಿಂದ 9 ದಿನಗಳ ಕಾಲ ಆಯೋಜಿಸಿದ್ದ ‘ಶರನ್ನವರಾತ್ರಿ ವೈಭವ’ ಶನಿವಾರ ಸಂಪನ್ನಗೊಂಡಿತು.
ಅರ್ಜುನ ಅವಧೂತರು ಮೈಸೂರಿನ ಗುರು ನಿವಾಸದಲ್ಲಿ ಸಾಯಿ ಆರತಿ ನೆರವೇರಿಸುವ ಮೂಲಕ ಶರನ್ನವರಾತ್ರಿ ಸಂಪನ್ನಗೊಳಿಸಿದರು. ಶ್ರೀ ವೆಂಕಟಾಚಲ ಅವಧೂತ ಗುರು ಮಹಾರಾಜರ ಆಶೀರ್ವಾದ ಮತ್ತು ಶ್ರೀ ಅರ್ಜುನ ಅವಧೂತರ ಉಪಸ್ಥಿತಿಯಲ್ಲಿ ನಡೆದ ಶರನ್ನವರಾತ್ರಿ ಕಾರ್ಯಕ್ರಮದಲ್ಲಿ ಕಲಾವಿದರ ಗಾನಸುಧೆ ಹರಿದರೆ, ಸಾಧಕರಿಗೆ ಸನ್ಮಾನ ಮಾಡಲಾಯಿತು. ಪ್ರತಿದಿನ ಬೆಳಗ್ಗೆ ಹೋಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರತಿ ದಿನ ಬೆಳಗ್ಗೆ ಹಾರೋಹಳ್ಳಿ ಬಳಿಯ ಶ್ರೀ ವೇಂಕಟಾರ್ಜುನ ಧ್ಯಾನ ಮಂದಿರದಲ್ಲಿ ಗಣಪತಿ ಸಹಿತ ನವದುರ್ಗಾ ಹೋಮ, ಲಕ್ಷ್ಮೀ ನಾರಾಯಣ ಹೋಮ, ಸ್ವಯಂವರ ಪಾರ್ವತಿ ಹೋಮ, ಬಾಲ ತ್ರಿಪುರ ಸುಂದರಿ ಹೋಮ, ಲಲಿತಾ ಹೋಮ, ಶ್ರೀ ಸೂಕ್ತ ಹೋಮ, ಸರಸ್ವತಿ ಹೋಮ, ದುರ್ಗಾ ಹೋಮ, ದುರ್ಗಾ ದೀಪ ನಮಸ್ಕಾರ ಹಾಗೂ ಚಂಡಿ ಹೋಮಗಳು ನಡೆದವು. ಅರ್ಜುನ ಅವಧೂತರು ಪೂರ್ಣಾಹುತಿ ನೆರವೇರಿಸಿದರು. ಅರಮನೆ ವೇದಿಕೆಯಂತೆ ನಗರದ ಸೋನಾರ್ ಬೀದಿಯ ಗುರು ನಿವಾಸದಲ್ಲೂ ಸಂಗೀತದ ನಿನಾದ ಮೊಳಗಿತು. ಖ್ಯಾತ ಕಲಾವಿದರು ಕಾರ್ಯಕ್ರಮ ನೀಡಿದರು.

108 ಮಹಿಳೆಯರಿಂದ ಲಲಿತಾ ಸಹಸ್ರನಾಮ ಪಾರಾಯಣ ಮತ್ತು ಕುಂಕುಮಾರ್ಚಾನೆ ನಡೆಯಿತು. ಚಿತ್ರ ನಟರು, ಕಿರುತೆರೆ ನಟ-ನಟಿಯರು ಸೇರಿದಂತೆ ಗಣ್ಯಾತಿ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿ ಭೂತರಾದರು. ಗುರು ನಿವಾಸ ವಿದ್ಯುತ್ ದೀಪಗಳು ಮತ್ತು ವಿವಿಧ ಪುಷ್ಪಗಳಿಂದ ಅಲಂಕೃತಗೊಂಡು ನವರಾತ್ರಿ ವೈಭವ ಮನೆ ಮಾಡಿತ್ತು.