ಶಿಕಾರಿಪುರದಲ್ಲಿ ಆಯೋಜಿಸಿದ್ದ ದಿ. ಮೈತ್ರಾದೇವಿ ಯಡಿಯೂರಪ್ಪ ದತ್ತಿನಿಧಿ ಕಾರ್ಯಕ್ರಮವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಉದ್ಘಾಟಿಸಿದರು. ಕೆ.ಎಸ್.ಗುರುಮೂರ್ತಿ, ಡಾ. ಶಿವಕುಮಾರ್, ಜಿ.ಎಸ್.ಸೋಮಶೇ ಖರ್ ಘಾಂಜಿ, ಬಸನಗೌಡ ಮಾಳಗಿ ಇತರರಿದ್ದರು. 
ನ್ಯೂಸ್

ಶರಣೆ ಅಕ್ಕಮಹಾದೇವಿ ಮಾನವೀಯತೆಯ ಪ್ರತೀಕ

ಶಿಕಾರಿಪುರ: ಶರಣ ಪರಂಪರೆ ಶುದ್ಧ ಸ್ಫಟಿಕದಂತೆ. 12ನೇ ಶತಮಾನದಲ್ಲಿ ಕಲ್ಮಶ, ರಾಗದ್ವೇಷ, ಮೇಲು-ಕೀಳು, ಬಡವ-ಧನಿಕ ಎಂಬುದಿರಲಿಲ್ಲ. ಶರಣರು ಮಾನವತೆಯ ಹಾದಿಯಲ್ಲಿ ಬದುಕಿದ, ಸಾಮಾಜಿಕ ಕಳಕಳಿಯ ಹರಿಕಾರರು. ಇಂತಹ ಶರಣ ಸಂಕುಲದಲ್ಲಿ ಪ್ರಕಾಶಿಸಿದವಳು ಅಕ್ಕಮಹಾದೇವಿ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಹೇಳಿದರು.

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಪ್ರಥಮದರ್ಜೆ ಕಾಲೇಜಿನಿಂದ ಆಯೋಜಿಸಿದ್ದ ದಿ. ಮೈತ್ರಾದೇವಿ ಯಡಿಯೂರಪ್ಪ ದತ್ತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರಣ ಚಳವಳಿಯನ್ನು ಸಾಮಾಜಿಕ ಕ್ರಾಂತಿಯನ್ನು ಬೆರಗುಗಣ್ಣಿನಿಂದ ನೋಡಿತ್ತು. ಬಸವಾದಿ ಶರಣರ ಕುಂಜದಲ್ಲಿ ಒಂದು ದಿಟ್ಟ ದನಿಯಾಗಿ, ಮೌಢ್ಯಗಳನ್ನು ಬದಿಗಿರಿಸಿ ಮಾನವತೆಯನ್ನು ಸಾರಿದವಳು ಅಕ್ಕಮಹಾದೇವಿ. ಜೀವನ ಮೌಲ್ಯಗಳೊಂದಿಗೆ ಆದರ್ಶಗಳನ್ನು ಇಟ್ಟುಕೊಂಡು ಬೆಳೆದವರು ಅಕ್ಕ. ಪ್ರಕೃತಿಯೊಂದಿಗೆ ಅನುಸಂಧಾನ ಮಾಡಿಕೊಳ್ಳುತ್ತ ವಚನಗಳ ಮೂಲಕ ತಳಮಟ್ಟದ ಜನರ ಹೃದಯ ಮುಟ್ಟುವ ಕೆಲಸ ಮಾಡಿದಳು ಎಂದರು.

ಅಕ್ಕಮಹಾದೇವಿ ಎನ್ನುವ ಹೆಸರೇ ವಿಸ್ಮಯಗಳ ಸಂಗಮ. ಕಾಮ, ಕ್ರೋಧಗಳನ್ನು ದೂರಮಾಡಿ ಸರ್ವರನ್ನೂ ಪ್ರೀತಿಸಿದವಳು. ವಿಡಂಬನಾತ್ಮಕ ವಚನಗಳೇ ಮಾನವೀಯ ಮೌಲ್ಯಗಳ ಸಾಕ್ಷಿರೂಪ. ಆದರ್ಶಗಳನ್ನು ಇಟ್ಟುಕೊಂಡು ಶರಣ ಸತಿ ಲಿಂಗ ಪತಿ ಎಂಬ ಮಾತುಗಳಿಗೆ ಸಾಕ್ಷಿಯಾಗಿ ಬದುಕಿದ ಮಹಾನ್ ಶರಣೆ ಎಂದು ಬಣ್ಣಿಸಿದರು.

ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ಅಕ್ಕನ ತನು, ಮನ, ಭಾವ ಶುದ್ಧ. ನಡೆ, ನುಡಿ ಎಲ್ಲವೂ ಪರಿಶುಧ್ದವಾಗಿದ್ದವು. ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿಯಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. 65 ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರವಾಸಿಗರನ್ನು ಸೆಳೆಯುತ್ತಿದೆ. ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ನಿರ್ಮಾಣವಾಗಿದೆ ಎಂದರು.

ಕುಮದ್ವತಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ. ಶಿವಕುಮಾರ್, ಜಿ.ಎಸ್.ಸೋಮಶೇಖರ್ ಘಾಂಜಿ, ಬಸನಗೌಡ ಮಾಳಗಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್.ಮಹಾರುದ್ರ, ತಾಲೂಕು ಅಧ್ಯಕ್ಷ ಎಂ.ಕೆ.ಶಶಿಧರಸ್ವಾಮಿ, ಸುಭಾಷ್‌ಚಂದ್ರ ಸ್ಥಾನಿಕ್, ಉಪನ್ಯಾಸಕ ಕೋಟೋಜಿ ರಾವ್ ಇತರರಿದ್ದರು.