ನ್ಯೂಸ್

ಕಲಾ ತಂಡಗಳೊಂದಿಗೆ ಶೋಭಾಯಾತ್ರೆ - ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಜಲಸ್ಥಂಭನ

Mangaluru - Nishantha Narayana

ಪುತ್ತೂರು: ನವರಾತ್ರಿ ಪ್ರಯುಕ್ತ ಶಾರದಾ ಭಜನಾ ಮಂದಿರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ೯೧ನೇ ವರ್ಷದ ಶಾರದೋತ್ಸವದ ಶೋಭಾಯಾತ್ರೆ ವಿವಿಧ ಕಲಾ ತಂಡಗಳ ಪ್ರದರ್ಶನದೊಂದಿಗೆ ಗುರುವಾರ ನಡೆಯಿತು.

ಶೋಭಾಯಾತ್ರೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಆಸ್ರಣ್ಣ ಚಾಲನೆ ನೀಡಿದರು. ಶಾರದೆಯ ರಥಕ್ಕೆ ಶಾಸಕ ಅಶೋಕ್ ಕುಮಾರ್ ರೈ ಪುಷ್ಪಾರ್ಚನೆ ಮಾಡಿದರು. ಭಗವಧ್ವಜಾರೋಹಣವನ್ನು ದ.ಕ. ಮಾಜಿ ಸಂಸದ ನೆರವೇರಿಸಿದರು.

ಭಗವಧ್ವಜ ವಾಹನ, ೫೦೦ ಮಂದಿ ಕುಣಿತ ಭಜಕರು, ಕೇರಳ ಕಲಾ ತಂಡ, ಸಹಸ್ರ ಬೆಳಕು ತಂಡ, ದೇವನೃತ್ಯಂ, ವೆಲಕ್ಯಾಟಂ, ಫ್ಲವರ್ ಡ್ಯಾನ್ಸ್, ಸಿಂಗಾರಿ ಕಾವಡಿ, ದೇವಿ ಬೋರ್ಡ್, ಆಂಧ್ರ ಪ್ರದೇಶದ ಗರುಡಾಯನ ನೃತ್ಯಂ, ಚೆಂಡೆ ಮೇಳ, ಸಿಂಗಾರಿ ಮೇಳ, ಕೊನೆಯಲ್ಲಿ ಶಾರದಾ ಮಾತೆಯ ರಥ ಚಲಿಸಿತು.

ಬೊಳುವಾರಿನಿಂದ ಆರಂಭಗೊಂಡ ಶೋಭಾಯಾತ್ರೆ ಪುತ್ತೂರು ಪೇಟೆಯ ಮುಖ್ಯರಸ್ತೆ ಮೂಲಕ ದರ್ಬೆ ತನಕ ತೆರಳಿ, ಮಹಾಲಿಂಗೇಶ್ವರ ದೇವಳಕ್ಕೆ ಬಂದು ಅಲ್ಲಿ ಲಿಫ್ಟ್ ವ್ಯವಸ್ಥೆ ಮೂಲಕ ದೇವಿಯ ವಿಗ್ರಹವನ್ನು ಜಲಸ್ಥಂಭನ ನಡೆಸಲಾಯಿತು. ಬೊಳುವಾರು ವೃತ್ತ, ಇನ್‌ಲ್ಯಾಂಡ್ ಮಯೂರ, ಶ್ರೀಧರ್ ಭಟ್ ಬಿಲ್ಡಿಂಗ್, ಬಸ್ ನಿಲ್ದಾಣ, ಹೋಟೆಲ್ ಸುಜಾತಾ, ದರ್ಭೆ ವೃತ್ತಗಳಲ್ಲಿ ಕಲಾ ತಂಡಗಳ ಪ್ರದರ್ಶನ ನಡೆದಿದ್ದು, ಭಕ್ತರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ನಟ ಮನೋಜ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ಸಹಕಾರ ಭಾರತಿ ಅಧ್ಯಕ್ಷ ಕೃಷ್ಣ ಕುಮಾರ್ ರೈ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಮುಖರಾದ ಮುರಳೀಕೃಷ್ಣ ಹಸಂತಡ್ಕ, ಸಾಜ ರಾಧಾಕೃಷ್ಣ ಆಳ್ವ, ದಯಾನಂದ ಶೆಟ್ಟಿ ಉಜಿರೆಮಾರು, ವಿರೂಪಾಕ್ಷ ಮಚ್ಚಿಮಲೆ, ಕಿಟ್ಟಣ್ಣ ಗೌಡ, ಪದ್ಮಾವತಿ ಅಮ್ಮ, ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಉತ್ಸವ ಸಮಿತಿಯ ನವೀನ್ ಕುಲಾಲ್, ವ್ಯವಸ್ಥಾಪಕ ಡಾ.ಸುರೇಶ್ ಪುತ್ತೂರಾಯ, ಸಂಯೋಜಕ ಕೃಷ್ಣ ಎಂ.ಅಳಿಕೆ ಮತ್ತಿತರರು ಉಪಸ್ಥಿತರಿದ್ದರು.