ಮುಂಬೈ: ಶರದ್ ಪವಾರ್ ಅವರನ್ನು ‘ಭ್ರಷ್ಟರ ಅಧಿಪತಿ’ ಎಂದು ಕರೆದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಶರದ್ ಪವಾರ್ ಪ್ರತಿಕ್ರಿಯಿಸಿದ್ದು, ನನ್ನನ್ನು ಭ್ರಷ್ಟ ಅಧಿಕಾರಿಗಳ ನಾಯಕ ಎಂದು ಕರೆದವರನ್ನು ಏಕೆ ಗುಜರಾತ್‌ನಿಂದ ಹೊರಹಾಕಲಾಯಿತು ಎಂದು ಪ್ರಶ್ನಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಮೂಲಕ ಗುಜರಾತ್‌ನಿಂದ ಹೊರಹಾಕಲ್ಪಟ್ಟ ವ್ಯಕ್ತಿಯೊಬ್ಬರು ಇಂತಹ ಮಹತ್ವದ ಸಚಿವಾಲಯದ ನೇತೃತ್ವ ವಹಿಸುತ್ತಿರುವುದು ವಿಚಿತ್ರವಾಗಿದೆ ಎಂದು ಟೀಕಿಸಿದ್ದಾರೆ.
2010ರಲ್ಲಿ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಷಾ ಅವರನ್ನು ಎರಡು ವರ್ಷಗಳ ಕಾಲ ರಾಜ್ಯದಿಂದ ನಿಷೇಧಿಸಲಾಗಿತ್ತು. ನಂತರ 2014ರಲ್ಲಿ ಪ್ರಕರಣದಿಂದ ಖುಲಾಸೆಗೊಂಡಿದ್ದರು. ಆಗ ಅಮಿತ್ ಷಾ ಗುಜರಾತ್‌ನ ಗೃಹ ಸಚಿವರಾಗಿದ್ದರು. ಅವರು ಕಾನೂನನ್ನು ದುರುಪಯೋಗಪಡಿಸಿಕೊಂಡರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅವರನ್ನು ಗುಜರಾತ್‌ನಿಂದ ಹೊರಹೋಗುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಆ ವ್ಯಕ್ತಿ ಈಗ ದೇಶದ ಗೃಹ ಸಚಿವರಾಗಿ ದೇಶ ರಕ್ಷಣೆಯ ಹೊಣೆ ಹೊತ್ತು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಶರದ್ ತಿಳಿಸಿದರು.
ಅಧಿಕಾರ ಇದ್ದವರು ತಮ್ಮ ಆಲೋಚನೆಯನ್ನು ಬದಲಾಯಿಸಿಲ್ಲ. ನಾವೆಲ್ಲರೂ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ದೇಶವು ತಪ್ಪು ದಿಕ್ಕಿನಲ್ಲಿ ಚಲಿಸಬಹುದು ಎಂದು ಶರದ್ ಪವಾರ್ ಹೇಳಿದ್ದಾರೆ.
ಪುಣೆಯಲ್ಲಿ ನಡೆದ ಬಿಜೆಪಿಯ ಒಂದು ದಿನದ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಶರದ್ ಪವಾರ್ ಅವರನ್ನು ಭ್ರಷ್ಟಾಚಾರದ ದೊಡ್ಡ ದೊರೆ ಎಂದು ಬಣ್ಣಿಸಿದ್ದರು. ಪವಾರ್ ಭ್ರಷ್ಟಾಚಾರದ ಸಂಸ್ಥೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. (ಏಜೆನ್ಸೀಸ್)