ನ್ಯೂಸ್

ಶಾಂತಿಪುರ ಗ್ರಾಮ ಸೀಲ್‌ಡೌನ್

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ಶಾಂತಿಪುರ ಗ್ರಾಮದ ಮಹಿಳೆಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ.

ಬೆಂಗಳೂರಿನ ಚರ್ಚ್‌ವೊಂದರಲ್ಲಿ ಕರ್ತವ್ಯದಲ್ಲಿದ್ದ 28 ವರ್ಷದ ಈ ಮಹಿಳೆ, ವಾರದ ಹಿಂದೆ ಊರಿಗೆ ವಾಪಸ್ ಬಂದಿದ್ದರು. ಹೀಗಾಗಿ ಮೂರು ದಿನಗಳ ಹಿಂದೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ವರದಿ ಗುರುವಾರ ಕೈ ಸೇರಿದ್ದು, ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆಯನ್ನು ಮೈಸೂರಿನ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

11 ಜನರಿಗೆ ಹೋಂ ಕ್ವಾರಂಟೈನ್: ಕುಟುಂಬದವರು ಸೇರಿದಂತೆ ಒಟ್ಟು 11 ಜನರು ಸೋಂಕಿತೆಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವುದನ್ನು ಗುರುತಿಸಿ ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಮಾಹಿತಿ ನೀಡಿದರು. ತಹಸೀಲ್ದಾರ್ ಐ.ಇ.ಬಸವರಾಜ, ತಾ.ಪಂ.ಇಒ ಗಿರೀಶ್ ಇತರ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆ ಸ್ಯಾನಿಟೈಸ್
ಹೆರಿಗೆಗೆಂದು ಜು.8ರಂದು ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸರ್ವೇಶ್‌ರಾಜ್ ಅರಸ್ ತಿಳಿಸಿದರು.

ಒಟ್ಟು ಮೂರು ದಿನಗಳ ಕಾಲ ಸ್ಯಾನಿಟೈಸ್ ಮಾಡಲಾಗುವುದು. ಜು.11ರಿಂದ ಆಸ್ಪತ್ರೆ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಅವರು ವಿಜಯವಾಣಿಗೆ ಮಾಹಿತಿ ನೀಡಿದರು.