ನ್ಯೂಸ್

ಮನುಷ್ಯ ಕಾಲಘಟ್ಟಗಳಿಂದ ಪಾಠ ಕಲಿಯಬೇಕಿದೆ : ಮಲಯ ಶಾಂತಮುನಿ ದೇಶಿಕೇಂದ್ರ ಸ್ವಾಮೀಜಿ ಅಭಿಮತ

Ramanagara

ಮಾಗಡಿ :  ಮನುಷ್ಯ ಕಾಲಘಟ್ಟಗಳಿಂದ ಪಾಠ ಕಲಿಯಬೇಕಿದೆ ಎಂದು ಮೇಲಣಗವಿ ಮಠದ ಮಲಯ ಶಾಂತಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ವೀರಶೈವ ಗಿರಿಜಾ ಕಲ್ಯಾಣ ಮಂಟಪದಲ್ಲಿ ನಡೆದ ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯ ಯೋಗ, ಜಪ, ಪೂಜೆ ಮಾಡಿ ಎಂದರೆ ಸಮಯವಿಲ್ಲ ಎನ್ನುತ್ತಿದ್ದರು. ಈಗ ಕರೊನಾದಿಂದಾಗಿ ಸಾಕಷ್ಟು ಸಮಯ ಸಿಕ್ಕಿದಂತಾಗಿದೆ. ಮನುಷ್ಯನಲ್ಲಿ ವಿಶ್ವಾಸವಿರಬೇಕು. ಅದನ್ನು ಕಳೆದುಕೊಳ್ಳುತ್ತಿದ್ದೇವೆ. ಆಹಾರ, ನೀರು ಕಲುಷಿತವಾಗುತ್ತಿದೆ. ಗಾಳಿಯನ್ನು ಸೋಸಿಕೊಂಡು ಉಸಿರಾಡುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮನುಷ್ಯನ ಅಂತರಂಗ ಬಹಿರಂಗ ಶುದ್ಧಗೊಳಿಸುವ ಕೆಲಸ ಮಾಡಿದಾಗ ಪ್ರಕೃತಿ ಶುದ್ಧವಾಗುತ್ತದೆ. ನಮ್ಮ ಹಿರಿಯರು ಗಿಡವನ್ನು, ನೀರನ್ನು, ಬೆಳೆಯನ್ನು ಬೆಳೆ ಎಂದು ಭಾವಿಸದೆ ಪ್ರಕೃತಿಯನ್ನು ದೇವರಂತೆ ಭಾವಿಸಿ ಆರೋಗ್ಯವಂತವರಾಗಿದ್ದರು. ಪ್ರಕೃತಿ ಬಗ್ಗೆ ಗೌರವ ಕಾಳಜಿ ಮರೆಯಾಗಿರುವುದರಿಂದ ಮನುಷ್ಯ ತನ್ನ ವಿನಾಶವನ್ನು ತಾನೇ ಆಹ್ವಾನಿಸಿಕೊಳ್ಳುತ್ತಿದ್ದಾನೆ ಎಂದರು.

ಮನುಷ್ಯ ಕುಟುಂಬ, ಪರಿವಾರಕ್ಕಾಗಿ ದುರಾಸೆಗೆ ಬಲಿಯಾಗಿ ಖಜಾನೆಯನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾನೆ. ಸಾಂಕ್ರಾಮಿಕ ಕಾಯಿಲೆಗೆ ಬಂದಾಗ ಕುಟುಂಬ ದೂರವಾಗುತ್ತದೆ. ಆದರೆ ಕೊರಳಿನ ಇಷ್ಟಲಿಂಗ ಕೈಬಿಡುವುದಿಲ್ಲ. ಇದೇ ನಿಜವಾದ ವೀರಶೈವ ಬಂಧುತ್ವ. ಮತ್ತೊಬ್ಬರ ಬಗ್ಗೆ ಕೆಟ್ಟ ಆಲೋಚನೆ, ಅಸೂಯೆ ಪಡಬಾರದರು. ಶತ್ರುವನ್ನು ನೆನೆಯುಷ್ಟು ಶಿವನನ್ನು ನೆನೆಯುತ್ತಿಲ್ಲ. ಹೀಗಾಗಿ ಮನುಷ್ಯ ಮನಸ್ಸು ಕಲುಷಿತಗೊಂಡಿರುವಾಗ ಶಾಂತಿ, ನೆಮ್ಮದಿ ಸಿಗಲು ಹೇಗೆ ಸಾಧ್ಯ ಎಂದರು.

ರೇಣುಕಾಚಾರ್ಯರು ದೇಶ - ವಿದೇಶಗಳಲ್ಲಿ ಧರ್ಮ ಪ್ರಚಾರ ಮಾಡಿ ಶ್ರೀಲಂಕಾದಲ್ಲಿ 3 ಕೋಟಿ ಲಿಂಗ ಸ್ಥಾಪಿಸಿದರು. ಇಲ್ಲಿ ಮನೆಗೊಬ್ಬ ರೇಣುಕಾ ಎಂಬ ಹೆಸರಿಟ್ಟುಕೊಂಡಿದ್ದಾರೆ. ಆದರೆ ಅವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡಾಗ ಮಾತ್ರ ಜಯಂತಿಗೆ ಅರ್ಥಬರುತ್ತದೆ ಎಂದರು. ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ಮಾತನಾಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಸಾಮಾಜಿಕ ತತ್ವ ಸಿದ್ದಾಂತಗಳು ಹಾಗೂ ಚಿಂತನೆಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿ ದೀಪ. ಬಹು ಜನ್ಮದ ಪುಣ್ಯದ ಫಲವಾಗಿರುವ ಮಾನವ ಜೀವನ ಶ್ರೇಯಸ್ಸಿಗಾಗಿ ಅವರು ಕೊಟ್ಟ ಸಂದೇಶ ಸರ್ವಕಾಲಕ್ಕೂ ಅವಶ್ಯಕ ಎಂದರು.

10ಕ್ಕೂ ಹೆಚ್ಚು ಪೌರಕಾರ್ಮಿಕರನ್ನು, ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ವೀರಶೈವ ಸಮುದಾಯದ ಗೌರವ ಅಧ್ಯಕ್ಷ ರುದ್ರಮೂರ್ತಿ, ಅಧ್ಯಕ್ಷ ಆನಂದಪ್ಪ, ಪುರಸಭೆ ಸದಸ್ಯರಾದ ಎಂ.ಆರ್. ರೇಖಾ, ಶಿವರುದ್ರಮ್ಮ ವಿಜಯ್ ಕುಮಾರ್, ಮಾಜಿ ಸದಸ್ಯ ರವಿ, ವೀರಶೈವ ಬ್ಯಾಂಕ್ ನಿರ್ದೇಶಕ ಶಿವರಾಜು, ಅನಿಲ್ ಕುಮಾರ್, ಕಾರ್ಯದರ್ಶಿ ಮಹಂತೇಶ್, ಪೊಲೀಸ್ ವಿಜಯ್ ಕುಮಾರ್, ಡಾ. ಮೂದೊಳೆ, ವಿನಯ್ ಕುಮಾರ್, ಪ್ರದೀಪ್, ರಂಜನ್, ಡಾ.ಮಂಜುನಾಥ್ ಇತರರು ಇದ್ದರು.

ಚರಿತ್ರೆಗಿಂತ ಚಾರಿತ್ರ್ಯಕ್ಕೆ ಮಹತ್ವಕೊಟ್ಟವರು :  ವೀರಶೈವ ಧರ್ಮ ಸಿದ್ಧಾಂತದಲ್ಲಿ ಸಕಲರ ಉನ್ನತಿಗೆ ಪೂರಕವಾದ ಮನೆ ಎಲ್ಲರೂ ಕಟ್ಟಬಲ್ಲರು. ಆದರೆ, ಆ ಸುಂದರ ಮನೆಯಲ್ಲಿ ಸುಖ ಶಾಂತಿಯಿಂದ ಬದುಕುವುದನ್ನು ಕಲಿತಾಗ ಜೀವನ ಸಾರ್ಥಕಗೊಳ್ಳುತ್ತದೆ ಎಂದು ಸಾರಿದ ರೇಣುಕಾಚಾರ್ಯರು, ಜಾತಿಗಿಂತ ನೀತಿಗೆ, ತತ್ವಕ್ಕಿಂತ ಆಚರಣೆಗೆ, ಮಾತಿಗಿಂತ ಕೃತಿಗೆ, ಬೋಧನೆಗಿಂತ ಸಾಧನೆಗೆ, ದಾನಕ್ಕಿಂತ ದಾಸೋಹಕ್ಕೆ, ಚರಿತ್ರೆಗಿಂತ ಚಾರಿತ್ರ್ಯಕ್ಕೆ ವಿಶೇಷ ಮಹತ್ವವನ್ನು ಕೊಟ್ಟ ಕೀರ್ತಿ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಚಂದ್ರಶೇಖರಯ್ಯ ತಿಳಿಸಿದರು.

ಸುಂದರ ಗುಣ ಬದುಕನ್ನೇ ಬದಲಿಸುತ್ತದೆ :  ವೀರಶೈವ-ಲಿಂಗಾಯತ ಮುಖಂಡ ಕೆ.ಪಿ.ಮಹದೇವ ಶಾಸ್ತ್ರಿ ಮಾತನಾಡಿ, ಸಂಸ್ಕಾರಯುಕ್ತ ಬದುಕಿನಿಂದ ಜೀವನದಲ್ಲಿ ಸರ್ವೋನ್ನತಿ ಪಡೆಯಲು ಸಾಧ್ಯ ಎಂಬುದನ್ನು ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿ ಸಕಲರನ್ನು ಉದ್ಧರಿಸಿದರು. ಸುಂದರವಾದ ಉಡುಗೆ ಮನುಷ್ಯನ ವ್ಯಕ್ತಿತ್ವವನ್ನು ಬದಲಿಸಬಹುದು. ಅದರೆ ಸುಂದರವಾದ ಗುಣ ಬದುಕನ್ನೇ ಬದಲಾಯಿಸುತ್ತದೆ. ಯಾವ ವ್ಯಕ್ತಿಯೇ ಆಗಲಿ, ಜನಾಂಗವೇ ಆಗಲಿ ಶ್ರದ್ಧೆ ಕಳೆದುಕೊಂಡರೆ ನಾಶ ಕಟ್ಟಿಟ್ಟ ಬುತ್ತಿ. ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಶ್ರೇಯಸ್ಕರ ಎಂಬುದನ್ನು ಅರಿತ ಜಗದ್ಗುರು ರೇಣುಕಾಚಾರ್ಯರು ಅಂಗ ಅವಗುಣ ನೀಗಿ ಲಿಂಗ ಗುಣ ಸಂಪನ್ನರನ್ನಾಗಿ ಮಾಡುವುದೇ ಅವರ ಜೀವನದ ಗುರಿಯಾಗಿತ್ತು ಎಂದರು.