ಶಿರಹಟ್ಟಿ: ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ, ಕುಗ್ರಾಮದಲ್ಲಿ ಕಲಿತ ಕುವರಿ ಈಗ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಗುವ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ. ಶಿರಹಟ್ಟಿ ತಾಲೂಕಿನ ನವೇಭಾವನೂರ ಗ್ರಾಮದ ಸಹನಾ ಫಕ್ಕೀರಗೌಡ ಪಾಟೀಲ ಪಿಎಸ್‌ಐ ನೇಮಕಾತಿ ಪಟ್ಟಿಯ ಮಹಿಳಾ ಮೀಸಲಾತಿಯಲ್ಲಿ ರಾಜ್ಯಕ್ಕೆ 26ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಇವರು ನವೇಭಾವನೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಪಕ್ಕದ ಮಾಚೇನಹಳ್ಳಿ ಸರ್ಕಾರಿ ಹೈಸ್ಕೂಲ್‌ನಲ್ಲಿ ಪ್ರೌಢ, ಶಿರಹಟ್ಟಿಯ ಡಬಾಲಿ ಕಾಲೇಜ್‌ನಲ್ಲಿ ಪಿಯುಸಿ, ಶಿರಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಪದವಿ ಶಿಕ್ಷಣ ಮುಗಿಸಿ, ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಉಪನ್ಯಾಸಕಿ ಆಗಬೇಕೆಂಬ ಆಸೆಯಿಂದ ಕೆಲ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರು. 2019ರಲ್ಲಿ ಮೊದಲ ಪ್ರಯತ್ನದಲ್ಲಿ ಆಗಿರದಿದ್ದರೂ 2020ರಲ್ಲಿ ಪಿಎಸ್‌ಐ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಸಕಲ ಸಿದ್ಧತೆಯೊಂದಿಗೆ ಮತ್ತೆ ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ 200ರಲ್ಲಿ 137 ಅಂಕ ಪಡೆದು ಮಹಿಳಾ ಕೋಟಾದಲ್ಲಿ ರಾಜ್ಯಕ್ಕೆ 26ನೇ ಸ್ಥಾನ ಪಡೆದಿದ್ದಾಳೆ.