ನ್ಯೂಸ್

ನಭಕ್ಕೆ ಹಾರಿದ ಶಕುಂತಲಾ ಉಪಗ್ರಹ; ಅಮೆರಿಕದ ಸ್ಪೆಸೆಕ್ಸ್​ನಿಂದ ಉಡಾವಣೆ, ಆಲ್ದೂರಿನ ಯುವಕನಿಂದ ತಯಾರಿಕೆ

Webdesk - Ravikanth

ಆಲ್ದೂರು(ಚಿಕ್ಕಮಗಳೂರು): ಆಲ್ದೂರಿನ ಯುವಕ ಅವೇಜ್ ಅಹಮದ್ ತಯಾರಿಸಿದ ‘ಶಕುಂತಲಾ’ ಉಪಗ್ರಹನನ್ನು ಶನಿವಾರ ಅಮೆರಿಕದ ಸ್ಪೆಸೆಕ್ಸ್ ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಅವೇಜ್ ಅಹಮದ್ ಪಿಕ್ಸೆಲ್ ಏರೋಸ್ಪೇಸ್ ಕಂಪನಿ ಆರಂಭಿಸಿ ಅದರ ಮೂಲಕ ಉಪಗ್ರಹ ತಯಾರಿಸಿದ್ದರು. ಇಸ್ರೋದಿಂದಲೇ ಪ್ರಥಮ ಉಪಗ್ರಹ ಆನಂದ್ ಅನ್ನು ಉಡಾವಣೆ ಮಾಡುವ ಮಹತ್ವಾಕಾಂಕ್ಷೆ ಅವರದಾಗಿತ್ತು. ಆದರೆ ಇಸ್ರೋದಲ್ಲಿ ಉಡಾವಣೆಗೆ ದಿನ ಸಿಗದ ಕಾರಣ ತಮ್ಮದೇ ನಿರ್ವಣದ ಮತ್ತೊಂದು ಉಪಗ್ರಹ ಶಕುಂತಲಾವನ್ನು ಅಮೆರಿಕದ ಸ್ಪೆಸೆಕ್ಸ್​ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ. ಶೀಘ್ರದಲ್ಲೇ ಇಸ್ರೋದಿಂದ ಆನಂದ್ ಉಪಗ್ರಹವನ್ನು ಉಡಾವಣೆ ಮಾಡುವ ಉದ್ದೇಶ ಹೊಂದಿದ್ದಾರೆ. ಸ್ಪೆಸೆಕ್ಸ್​ನಿಂದ ಉಡಾವಣೆ ಮಾಡಿರುವ ಶಕುಂತಲಾ ಉಪಗ್ರಹ ಬೇರೆ ಎಲ್ಲ ಉಪಗ್ರಹಗಳಿಗಿಂತ ಶೇ.50ಕ್ಕೂ ಹೆಚ್ಚು ಡೇಟಾ ಬಿಡುಗಡೆಗೊಳಿಸುತ್ತದೆ. ಈ ಉಪಗ್ರಹ ಭೂಮಿಯ ಚಲನದ ಫೋಟೋ, ಕೃಷಿ ಪ್ರಗತಿ, ಹವಾಮಾನ ಇನ್ನಿತರ ಮಾಹಿತಿ ರವಾನಿಸುತ್ತದೆ.

ಪಿಕ್ಸೆಲ್ ಏರೋಸ್ಪೇಸ್: ಅವೇಜ್ ಅಹಮದ್ ಆಲ್ದೂರಿನ ಮೆಡಿಕಲ್ಸ್ ಮಾಲೀಕ ನದೀಮ್ ಅಹಮದ್ ಅವರ ಪುತ್ರ. ಎಂಎಸ್ಸಿ ಮ್ಯಾಥಮೆಟಿಕ್ಸ್ ಡಿಗ್ರಿ ಪಡೆದು ಹೊರಬಂದ ಬಳಿಕ ಪಿಕ್ಸೆಲ್ ಎಂಬ ಏರೋಸ್ಪೇಸ್ ಕಂಪನಿ ಪ್ರಾರಂಭಿಸಿದ್ದಾರೆ. ಎಲನ್ ಮಾಸ್ಕ್ ಅವರ ಎರೋಸ್ಪೇಸ್ ಕಂಪೆನಿ ‘ಸ್ಪೆಸೆಕ್ಸ್’ನಿಂದ ಪ್ರಭಾವಿತರಾದ ಅವೇಜ್ ಭಾರತದಲ್ಲಿಯೂ ಇದೇ ರೀತಿಯ ಕಂಪನಿ ಪ್ರಾರಂಭಿಸಬೇಕೆಂಬ ಹೆಬ್ಬಯಕೆ ಇಟ್ಟುಕೊಂಡಿದ್ದರು.