ಶಿಕಾರಿಪುರ: ಪುರಸಭೆ ಆಡಳಿತದ ದ್ವಿತೀಯಾರ್ಧದ ಅವಧಿಗೆ ನಿರೀಕ್ಷೆಯಂತೆ ಅಧ್ಯಕ್ಷರಾಗಿ 5ನೇ ವಾರ್ಡ್‌ನ ಶೈಲಾ ಯೋಗೀಶ್ ಮತ್ತು ಉಪಾಧ್ಯಕ್ಷರಾಗಿ 9ನೇ ವಾರ್ಡ್‌ನ ರೂಪಾ ಮಂಜುನಾಥ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
23 ಸದಸ್ಯ ಬಲದ ಪುರಸಭೆಯಲ್ಲಿ ಬಿಜೆಪಿ 14, ಕಾಂಗ್ರೆಸ್‌ನ 9 ಸದಸ್ಯರಿದ್ದರು. ಮಹೇಶ್ ಹುಲ್ಮಾರ್ ಕಾಂಗ್ರೆಸ್‌ನಿಂದ ಹೊರಬಂದ ನಂತರ ಕಾಂಗ್ರೆಸ್ ಸದಸ್ಯರ ಸಂಖ್ಯೆ 8ಕ್ಕೆ ಕುಸಿದಿದೆ. ಕಳೆದ ಒಂದೂವರೆ ದಶಕದಿಂದ ಮಹಿಳೆಯರೇ ಪುರಸಭೆಯಲ್ಲಿ ಮಹಿಳೆಯರೇ ಅಧಿಕಾರ ನಡೆಸಿಕೊಂಡು ಬಂದಿದ್ದಾರೆ. ಚುನಾವಣಾಧಿಕಾರಿಯಾಗಿ ಸಾಗರ ಎಸಿ ಆರ್.ಯತೀಶ್ ಕಾರ್ಯ ನಿರ್ವಹಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಭಾಗಿಯಾಗಿದ್ದರು. ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಮುಖ್ಯಾಧಿಕಾರಿ ಭರತ್ ಇದ್ದರು
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಂತರ ಬಿಜೆಪಿ ಕಾರ್ಯಕರ್ತರು ಪುರಸಭೆಯಿಂದ ಮೆರವಣಿಗೆ ಆರಂಭಿಸಿ ಜಯನಗರ ಸರ್ಕಲ್ ಮಾರ್ಗವಾಗಿ ಪೋಸ್ಟ್ ಆಫೀಸ್ ರಸ್ತೆ, ತಾಲೂಕು ಕಚೇರಿ ರಸ್ತೆ, ಹೊಯ್ಸಳ ಸರ್ಕಲ್ ಮೂಲಕ ಮಾಳೇರಕೇರಿ ಬಿಜೆಪಿ ಕಚೇರಿ ತಲುಪಿತು.
ಪುರಸಭೆ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಶಿಕಾರಿಪುರ ಪುರಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಂತಹ ನಾಯಕರು ಸೇವೆ ಸಲ್ಲಿಸಿದ್ದಾರೆ. ಸ್ವಚ್ಛ, ಸುಂದರ, ಸ್ವಸ್ಥ ಶಿಕಾರಿಪುರ ನಿರ್ಮಾಣಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ನಿಮಗೆ ಈಗ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ದಶಕಗಳಿಂದಲೂ ಪುರಸಭೆಯ ಹಿಂದಿನ ಆಡಳಿತ ಮಂಡಳಿಗಳು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಎಲ್ಲರ ಸಲಹೆ, ಸಹಕಾರ ಪಡೆದು ಪುರಸಭೆಯನ್ನು ಇನ್ನಷ್ಟು ಜನಸ್ನೇಹಿ ಮಾಡಿ. ಪುರಸಭೆಯಲ್ಲಿ ಸಹಜವಾಗಿ ಸಮಸ್ಯೆಗಳಿರುತ್ತವೆ. ನೀವು ಜನರ ದನಿಯಾಗಿ ಕೆಲಸ ಮಾಡಿ. ಜನತೆ ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ನಿರೀಕ್ಷೆ ಹುಸಿ ಮಾಡಬೇಡಿ. ಪ್ರಮುಖವಾಗಿ ಮೂಲ ಸೌಕರ್ಯಗಳ ಕಡೆಗೆ ಹೆಚ್ಚಿನ ಗಮನ ಕೊಡಿ ಎಂದು ತಿಳಿಸಿದರು.
ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಶಿಕಾರಿಪುರ ಪುರಸಭೆಯನ್ನು ಉನ್ನತ ಸ್ಥಿತಿಗೆ ಕೊಂಡೊಯ್ಯುವ ಜವಾಬ್ದಾರಿ ನಿಮ್ಮ ಮೇಲಿದೆ. ಪಟ್ಟಣದ ಜನರ ಸಮಸ್ಯೆ ನಿವಾರಿಸುವುದು, ಅಭಿವೃದ್ಧಿ ನಿಮ್ಮ ಮೊದಲ ಆದ್ಯತೆಯಾಗಲಿ.ತಾಲೂಕಿನಲ್ಲಿ ಕಾರ್ಯಕರ್ತರ ಒಗ್ಗಟ್ಟಿದೆ. ಕಾರ್ಯಕರ್ತರೇ ಪಕ್ಷಕ್ಕೆ ಯಾವತ್ತೂ ಭೀಮಬಲ. ರಾಜ್ಯದಲ್ಲಿ ಪಕ್ಷದ ವರ್ಚಸ್ಸು ದಿನೇದಿನೆ ವೃಧ್ದಿಯಾಗುತ್ತಿದೆ. ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿದರು.
ಎಲ್ಲರ ಜತೆಗೂಡಿ ಜನಪರ ಆಡಳಿತ ನೀಡುತ್ತೇವೆ. ನಮಗೆ ದೊರೆತ ಅವಕಾಶ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂದು ನೂತನ ಉಪಾಧ್ಯಕ್ಷೆ ರೂಪಾ ಮಂಜುನಾಥ್ ಹೇಳಿದರು.
ಪುರಸಭೆ ಸದಸ್ಯರಾದ ಪ್ರಶಾಂತ್ ಜೀನಳ್ಳಿ, ಪಾಲಾಕ್ಷಪ್ಪ, ರೇಣುಕಸ್ವಾಮಿ, ರೂಪಕಲಾ ಹೆಗ್ಡೆ, ಮುಖಂಡರಾದ ವಸಂತಗೌಡ, ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ವೀರನಗೌಡ, ನಗರಾಧ್ಯಕ್ಷ ಮಾಜಿ ರಾಘವೇಂದ್ರ, ಬೆಣ್ಣೆ ಪ್ರವೀಣ ಇತರರಿದ್ದರು.