ಸುಮಾರು 5 ಕೋಟಿ ರೂಪಾಯಿ ಮೌಲ್ಯದ ವಾಚ್ ಧರಿಸಿದ ಶಾರುಖ್ ಖಾನ್, ರಣವೀರ್ ಸಿಂಗ್ 
ನ್ಯೂಸ್

ಶಾರುಖ್ ಖಾನ್ ವಾಚ್ ಬೆಲೆ 3.49 ಕೋಟಿ ರೂ.! ರಣವೀರ್ ಗಡಿಯಾರದ ಪ್ರೈಸ್​ ಎಷ್ಟು ಗೊತ್ತಾ? | Luxury Watches

Luxury Watches: ಬಾಲಿವುಡ್ ತಾರೆಯರಾದ ಶಾರುಖ್ ಖಾನ್ ಹಾಗೂ ರಣವೀರ್ ಸಿಂಗ್ ಅವರ ಫ್ಯಾಷನ್ ಕ್ರೇಜ್ ಮತ್ತೊಮ್ಮೆ ಸುದ್ದಿಯಲ್ಲಿದೆ. ಮುಂಬೈನ ಗೇಟ್‌ವೇ ಆಫ್ ಇಂಡಿಯಾದಲ್ಲಿ ಆಯೋಜಿಸಲಾಗಿದ್ದ 'ಗ್ಲೋಬಲ್ ಪೀಸ್ ಹಾನರ್ಸ್ 2026' ಸಮಾರಂಭದಲ್ಲಿ ಮಿಂಚಿದ ಈ ಇಬ್ಬರು ನಟರು ಧರಿಸಿದ್ದ ದುಬಾರಿ ವಾಚ್‌ಗಳ ಒಟ್ಟು ಅಂದಾಜು ಬೆಲೆ ಬರೋಬ್ಬರಿ 4.96 ಕೋಟಿ ರೂ. ಆಗಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ರಣವೀರ್ ಸಿಂಗ್ ಧರಿಸಿದ್ದ ಬ್ರೌನ್ ಡಯಲ್‌ನ ರೋಸ್ ಗೋಲ್ಡ್ 'ಪಟೆಕ್ ಫಿಲಿಪ್ ಅಕ್ವಾನಾಟ್ ಕ್ರೋನೋಗ್ರಾಫ್' ವಾಚ್‌ನ ಅಂದಾಜು ಬೆಲೆ 1.47 ಕೋಟಿ ರೂ. ಆಗಿದ್ದರೆ, ಶಾರುಖ್ ಖಾನ್ ಅವರ 'ಆಡೆಮಾರ್ಸ್ ಪಿಗೆ ರಾಯಲ್ ಓಕ್ ಜಂಬೋ ಎಕ್ಸ್‌ಟ್ರಾ ಥಿನ್' ವಾಚ್‌ನ ಮೌಲ್ಯ 3.49 ಕೋಟಿ ರೂ. ಆಗಿದೆ. ಇವರಿಬ್ಬರ ವಾಚ್‌ಗಳ ಒಟ್ಟು ಬೆಲೆ ಸೇರಿಸಿದರೆ ಸುಮಾರು 5 ಕೋಟಿ ರೂ. ಆಗುತ್ತದೆ.

ಮುಂಬೈನ ಐತಿಹಾಸಿಕ ಗೇಟ್‌ವೇ ಆಫ್ ಇಂಡಿಯಾ ಬಳಿ ನಡೆದ ಗ್ಲೋಬಲ್ ಪೀಸ್ ಹಾನರ್ಸ್ 2026 ಕಾರ್ಯಕ್ರಮದಲ್ಲಿ ಬಾಲಿವುಡ್ ಹಾಗೂ ಕ್ರೀಡಾ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಿದ್ದರು. ಭಯೋತ್ಪಾದನೆಯ ವಿರುದ್ಧ ಹೋರಾಡಿದವರ ಧೈರ್ಯ ಮತ್ತು ತ್ಯಾಗವನ್ನು ಗೌರವಿಸುವುದು ಹಾಗೂ ಸಂತ್ರಸ್ತರನ್ನು ಸ್ಮರಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.

ಇನ್ನು, ಈ ಸಮಾರಂಭಕ್ಕೆ ಬಾಲಿವುಡ್, ಕ್ರೀಡೆ ಮತ್ತು ಉದ್ಯಮ ಲೋಕದ ಗಣ್ಯರ ದಂಡೇ ಹರಿದುಬಂದಿತ್ತು. ಶಾರುಖ್ ಖಾನ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಬೊಮನ್ ಇರಾನಿ, ಸಚಿನ್ ತೆಂಡೂಲ್ಕರ್, ಗಾಯಕ ಸುಖ್‌ವಿಂದರ್ ಸಿಂಗ್ ಹಾಗೂ ಅನಂತ್ ಅಂಬಾನಿ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆರುಗು ನೀಡಿದರು.