ನ್ಯೂಸ್

ಜೈಲಿಗೆ ತೆರಳಿ ಮಗನನ್ನು ಭೇಟಿಯಾದ ನಟ ಶಾರುಖ್​ ಖಾನ್

ಮುಂಬೈ: ಬಾಲಿವುಡ್​ ನಟ ಶಾರುಖ್​ ಖಾನ್​ ಇಂದು ಡ್ರಗ್ಸ್​ ಕೇಸಲ್ಲಿ ಜೈಲಿನಲ್ಲಿರುವ ತಮ್ಮ ಮಗ ಆರ್ಯನ್​ ಖಾನ್​​ಅನ್ನು ಭೇಟಿ ಮಾಡಿದರು. ಕ್ರೂಸ್​ ಶಿಪ್​ನಲ್ಲಿ ಡ್ರಗ್ಸ್​ ಪಾರ್ಟಿ ಹಿನ್ನೆಲೆಯಲ್ಲಿ ಅ.3 ರಂದು ಬಂಧಿಸಲ್ಪಟ್ಟ ನಂತರ ಕುಟುಂಬದ ಸದಸ್ಯರನ್ನು ಆರ್ಯನ್​ ಭೇಟಿ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.

ಭದ್ರತೆಯ ದೃಷ್ಟಿಯಿಂದ ಜೈಲಿನ ಪ್ರದೇಶದಲ್ಲಿ ಬೇರೆಯವರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದರೂ, ಖೈದಿಗಳ ಭೇಟಿಯ ಸಾಮಾನ್ಯ ನಿಯಮಗಳ ಅನುಸಾರವಾಗಿಯೇ ಶಾರುಖ್​ ಖಾನ್​ರ ಭೇಟಿಗೆ ಅವಕಾಶ ನೀಡಲಾಯಿತು. ಇನ್ಸ್​ಸ್ಪೆಕ್ಟರ್​ ಮಟ್ಟದ ಓರ್ವ ಅಧಿಕಾರಿ ಮತ್ತು ಐವರು ಇತರ ಜೈಲು ಸಿಬ್ಬಂದಿಯ ಉಪಸ್ಥಿತಿಯಲ್ಲಿ ಮಗನೊಂದಿಗೆ 18 ನಿಮಿಷಗಳ ಕಾಲ ಶಾರುಖ್​ ಮಾತನಾಡಿದರು. ಜೈಲಿನ ನಿಯಮ ಮತ್ತು ಕೋವಿಡ್​ ಪ್ರೋಟೋಕಾಲ್​ನಂತೆ ಗ್ರಿಲ್ ಮತ್ತು ಗಾಜಿನ ಗೋಡೆಯಿಂದ ಬೇರ್ಪಟ್ಟ ಅಪ್ಪ-ಮಗ ಇಂಟರ್​ಕಾಂ ಬಳಸಿ ಮಾತನಾಡಿದರು ಎನ್ನಲಾಗಿದೆ.

ನಿನ್ನೆಯ ದಿನ ಆರ್ಯನ್​ ಖಾನ್​ರ ಜಾಮೀನು ಅರ್ಜಿಯನ್ನು ಎನ್​ಡಿಪಿಎಸ್​ ವಿಶೇಷ ಕೋರ್ಟ್​ ವಜಾಗೊಳಿಸಿತ್ತು. ಮುಂಬೈನ ಅರ್ಥರ್​ ರೋಡ್​ ಜೈಲಿನಲ್ಲಿ ಅದಾಗಲೇ 13 ದಿನ ಕಳೆದಿರುವ ಆರ್ಯನ್​ ಪರವಾಗಿ ಆತನ ವಕೀಲರು ಶೀಘ್ರವೇ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. (ಏಜೆನ್ಸೀಸ್)