ಮುಂಬೈ: ಬಾಲಿವುಡ್ನ ಹೆಸರಾಂತ ನಿರ್ದೇಶಕ ರಾಜ್ಕುಮಾರ್ ಹಿರಾನಿ ನಿರ್ದೇಶನದ ಹಾಗೂ ನಟ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ 'ಡಂಕಿ' ಇದೇ ಡಿ.21 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು, ಸಿನಿಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆ ಪಡೆದುಕೊಳ್ಳುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದರೂ ಕೂಡ ಶಾರುಖ್ ಚಿತ್ರ ಇದೀಗ ಚಿತ್ರರಸಿಕರ ಗಮನ ಸೆಳೆಯುವಲ್ಲಿ ಮುಂಚೂಣಿಯಲ್ಲಿದೆ.
ಇದನ್ನೂ ಓದಿ: ಮೈಚಾಂಗ್ ಚಂಡಮಾರುತ: ವಿಪತ್ತು ಪರಿಹಾರ ವಿಚಾರಕ್ಕೆ ವಿತ್ತ ಸಚಿವೆ ಮತ್ತು ಡಿಎಂಕೆ ಸರ್ಕಾರ ವಿರುದ್ಧ ಮಾತಿನ ಸಮರ!
ಸಿನಿಮಾ ಕುರಿತಂತೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ನಟ ಶಾರುಖ್ ಖಾನ್, ಸಿನಿಮಾದಲ್ಲಿ ತಮ್ಮ ಹಾರ್ಡಿ ಸಿಂಗ್ ಪಾತ್ರದ ಬಗ್ಗೆ ಇದ್ದ ಒಂದಷ್ಟು ಸಂಗತಿಗಳನ್ನು ಹಂಚಿಕೊಂಡರು. ವಯಸ್ಸಿಗೆ ಸರಿಹೊಂದುವ ಪಾತ್ರವನ್ನು ನಿರ್ವಹಿಸುವುದರ ಕುರಿತಾಗಿ ಚರ್ಚಿಸಿದ ಕಿಂಗ್ ಖಾನ್, 'ಜವಾನ್' ಚಿತ್ರದಲ್ಲಿನ ವಿಕ್ರಮ್ ರಾಥೋಡ್ ಪಾತ್ರದ ಬಗ್ಗೆ ಕೂಡ ಆಸಕ್ತಿದಾಯಕ ವಿಷಯಗಳನ್ನು ಬಹಿರಂಪಡಿಸಿದರು.
ವಯಸ್ಸಿನ ಸುತ್ತ ಸುತ್ತುವ ಪಾತ್ರಗಳನ್ನು ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ ಶಾರುಖ್, "ನನಗೆ ಈಗ 58 ವರ್ಷ ವಯಸ್ಸು. ಮತ್ತು ನಾನು ಈಗ ವಯಸ್ಸಿನ ಕೇಂದ್ರಿತ ಪಾತ್ರಗಳನ್ನು ಮಾಡಬೇಕು ಎಂಬುದನ್ನು ಭಾವಿಸುತ್ತೇನೆ. 'ಡಂಕಿ'ಯಲ್ಲಿ ಹಾರ್ಡಿ ತುಂಬಾ ನೈಜ ವ್ಯಕ್ತಿಯಾಗಿದ್ದನು. ಒಂದು ನಿರ್ದಿಷ್ಟ ವಯಸ್ಸು ಮತ್ತು ಹಲವು ವರ್ಷಗಳ ಅವಧಿಯು ತುಂಬಾ ಆಸಕ್ತಿದಾಯಕವಾಗಿದೆ. ನಾನು ಡಂಕಿಯಲ್ಲಿ ಮೊದಲ ಬಾರಿಗೆ ನನ್ನ ವಯಸ್ಸಿಗೆ ತಕ್ಕಂತೆ ಮಾಡಿದ್ದೇನೆ" ಎಂದರು.
"ಡಂಕಿಯಲ್ಲಿನ ಪಾತ್ರದ ವಯಸ್ಸು ಹಾಗೂ ನನ್ನ ವಯಸ್ಸು ಆಸುಪಾಸಿನಲ್ಲಿತ್ತು. ನಾನು ಅದನ್ನು ಸಾಧ್ಯವಾದಷ್ಟು ನೈಜವಾಗಿಯೇ ಮಾಡಲು ಪ್ರಯತ್ನಿಸಿದ್ದೇನೆ" ಎಂದು ಶಾರುಖ್ ಹೇಳಿದರು. ಚಿತ್ರದಲ್ಲಿ ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮತ್ತು ಬೊಮನ್ ಇರಾನಿ ಮುಖ್ಯಭೂಮಿಕೆಯಲ್ಲಿದ್ದು, ಸಂಕಲನ ಹಾಗೂ ನಿರ್ದೇಶನ ಎರಡು ಜವಾಬ್ದಾರಿಯನ್ನು ಹಿರಾನಿ ನಿರ್ವಹಿಸಿದ್ದಾರೆ,(ಏಜೆನ್ಸೀಸ್).