ನ್ಯೂಸ್

'ಡಂಕಿ' ಬಿಡುಗಡೆಗೂ ಮುನ್ನ ವೈಷ್ಣೋದೇವಿ ದೇಗುಲಕ್ಕೆ ತೆರಳಿದ ಕಿಂಗ್ ಖಾನ್; ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ದೇವಿಯ ದರ್ಶನ ಪಡೆದ ಶಾರುಖ್

ಮುಂಬೈ: 2023ನೇ ವರ್ಷ ಬಾಲಿವುಡ್‌ ಬಾದ್​​ಶಾ ಶಾರುಖ್ ಖಾನ್‌ಗೆ ತುಂಬಾ ಅದೃಷ್ಟದ ವರ್ಷವಾಗಿದೆ. ವರ್ಷದ ಆರಂಭದಲ್ಲಿ, ನಟನ ಚಿತ್ರ 'ಪಠಾಣ್' ಬಾಕ್ಸ್ ಆಫೀಸ್​​​ನಲ್ಲಿ ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಶಾರುಖ್ ಅಭಿನಯದ ಜವಾನ್ ಕೂಡ ವರ್ಷದ ಮಧ್ಯದಲ್ಲಿ ಮೆಗಾ ಬ್ಲಾಕ್ ಬಸ್ಟರ್ ಆಗಿದ್ದು, ಈಗ ಕಿಂಗ್ ಖಾನ್ ಅಭಿನಯದ 'ಡಂಕಿ' ಚಿತ್ರ ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ.  ಚಿತ್ರ ಬಿಡುಗಡೆಯಾಗುವ ಕೆಲವು ದಿನಗಳ ಮೊದಲು ಶಾರುಖ್ ಖಾನ್ ಮತ್ತೊಮ್ಮೆ ಮಾತಾ ವೈಷ್ಣೋದೇವಿಯ ದೇಗುಲಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು.

ಎಸ್​​​ಆರ್​​ಕೆ 'ಡಂಕಿ' ಬಿಡುಗಡೆಗೂ ಮುನ್ನ ಮಾತಾ ವೈಷ್ಣೋ ದೇವಿಯ ದೇಗುಲಕ್ಕೆ ತೆರಳಿದರು. ಶಾರುಖ್ ಅವರ 'ಡಂಕಿ' ಈ ವರ್ಷ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ಬಿಡುಗಡೆಗೆ ಕೆಲವು ದಿನಗಳ ಮೊದಲು, ಕಿಂಗ್ ಖಾನ್ ದೇವಿಯ ದೇವಸ್ಥಾನವನ್ನು ತಲುಪಿದ್ದಾರೆ. ಮಂಗಳವಾರ ಅಂದರೆ ಇಂದು ಬೆಳಗ್ಗೆ ದೇವಿಯ ದರ್ಶನ ಪಡೆದರು.  

ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವಿಡಿಯೋದಲ್ಲಿ, ಶಾರುಖ್ ಕಪ್ಪು ಕನ್ನಡಕ ಮತ್ತು ಅದೇ ಬಣ್ಣದ ಜಾಕೆಟ್‌ನೊಂದಿಗೆ ತನ್ನ ಗುರುತನ್ನು ಮರೆಮಾಚುತ್ತಿರುವುದು ಕಂಡುಬಂದಿದೆ. ಈ ಸಮಯದಲ್ಲಿ, ನಟನ ಜೊತೆ ಭದ್ರತಾ ಸಿಬ್ಬಂದಿ ಮತ್ತು ಅವರ ಮ್ಯಾನೇಜರ್ ಜೊತೆಗಿದ್ದರು. ಸುದ್ದಿ ಸಂಸ್ಥೆ ಪಿಟಿಐ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ವಿಡಿಯೋ ಹಂಚಿಕೊಳ್ಳುವಾಗ, "ಬಾಲಿವುಡ್ ನಟ ಶಾರುಖ್ ಖಾನ್ ಇಂದು ಮುಂಜಾನೆ ಮಾತಾ ವೈಷ್ಣೋ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು" ಎಂದು ಬರೆದುಕೊಂಡಿದೆ.

'ಡಂಕಿ' ರಿಲೀಸ್ ಯಾವಾಗ? 
ಡಿಸೆಂಬರ್ 21 ರಂದು 'ಡಂಕಿ' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಮಾಡುವ ಮೂಲಕ ನಿರ್ಮಾಪಕರು ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದ್ದಾರೆ. ಚಿತ್ರದ ತಾರಾಬಳಗದ ಬಗ್ಗೆ ಮಾತನಾಡುವುದಾದರೆ ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಸೇರಿದಂತೆ ಅನೇಕ ನಟರು 'ಡಂಕಿ' ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಪ್ರಭಾಸ್ ಅಭಿನಯದ 'ಸಲಾರ್'ಗೆ ಸೆಡ್ಡು ಹೊಡೆಯಲಿದೆಯಂತೆ. ಸದ್ಯ 'ಡಂಕಿ' ಕೂಡ ಥಿಯೇಟರ್ ಗಳಲ್ಲಿ ಗಳಿಕೆಯ ದಾಖಲೆಗಳನ್ನು ಮುರಿಯಲಿದೆ ಎಂಬ ನಿರೀಕ್ಷೆಯಲ್ಲಿ ಕಿಂಗ್ ಖಾನ್ ಅಭಿಮಾನಿಗಳು ಇದ್ದಾರೆ.