ನ್ಯೂಸ್

ಬಾಲಕಿ ಮೇಲೆ ಲೈಂಗಿಕ ಕಿರುಕುಳ; ಅಪರಾಧಿಗೆ 20 ವರ್ಷ ಜೈಲು

ಬೆಂಗಳೂರು: ಪಕ್ಕದ ಮನೆಯ ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಎ್ಟಿಎಸ್‌ಸಿ 1ನೇ ನ್ಯಾಯಾಲಯ ತೀರ್ಪು ನೀಡಿದೆ.

ಲಗ್ಗೆರೆ ನಿವಾಸಿ ಚೇತನ್ (21) ಅಪರಾಧಿ. 20 ವರ್ಷ ಜೈಲು, 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಧೀಶ ಎನ್.ಎಂ. ರಮೇಶ್ ಅವರು, ನೊಂದ ಬಾಲಕಿಗೆ ಡಿಎಲ್‌ಎಸ್‌ಎಯಿಂದ 50 ಸಾವಿರ ರೂ. ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದಾರೆ.

2022ರ ಜು.7ರ ಸಂಜೆ ಪಕ್ಕದ ಮನೆಯಲ್ಲಿ ನೆಲೆಸಿದ್ದ ಬಾಲಕಿಯನ್ನು ಚೇತನ್ ತನ್ನ ಮನೆಗೆ ಕರೆದೊಯ್ದು ಬಾಗಿಲು ಲಾಕ್ ಮಾಡಿಕೊಂಡಿದ್ದ. ಬಾಲಕಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ನೊಂದ ಬಾಲಕಿ ತಂದೆ ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಅಂದಿನ ಇನ್‌ಸ್ಪೆಕ್ಟರ್ ವೆಂಕಟೇಗೌಡ ನೇತೃತ್ವದ ತಂಡ ಚೇತನ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.