Murder: ತಮಿಳುನಾಡಿ ಥೇಣಿ ಜಿಲ್ಲೆಯ ತೆಪ್ಪಂಪಟ್ಟಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆಟೋ ಚಾಲಕನನ್ನು ಅಪ್ರಾಪ್ತ ಬಾಲಕರು ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ಕೊಂದಿರುವ ಘಟನೆ ನಡೆದಿದೆ ಎಂದು ಮಂಗಳವಾರ(ಆಗಸ್ಟ್ 26) ವರದಿಯಾಗಿದೆ.
ಘಟನೆ ಸಂಬಂಧಿಸಿದಂತೆ ಥೇಣಿಯ ರಾಜಥಾನಿ ಪೊಲೀಸರು ನಾಲ್ವರು ಅಪ್ರಾಪ್ತ ಬಾಲಕರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಶನಿವಾರದಂದು ತೆಪ್ಪಂಪಟ್ಟಿಯ ಸರ್ಕಾರಿ ಶಾಲೆಯ ಆವರಣದಲ್ಲಿ ಮೃತ ಆಟೋ ಚಾಲಕ ಥಂಗಮಲೈ (43) ರ ಬೆತ್ತಲೆ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಕೊಲೆಯಾದ ಥಂಗಮಲೈ ಕಳೆದ ಎರಡು ತಿಂಗಳಿನಿಂದ ನಾಲ್ಕು ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಅವನು ಮತ್ತೊಮ್ಮೆ ಮತ್ತೊಬ್ಬ ಬಾಲಕನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಇದನ್ನು ನೋಡಿದ ಅಜಿತ್‌ಕುಮಾರ್ (27) ಮತ್ತು ಇತರ ಮೂವರು ಅಪ್ರಾಪ್ತರು ಒಟ್ಟಿಗೆ ಸೇರಿ ಅವನನ್ನು ಕ್ರಿಕೆಟ್ ಬ್ಯಾಟ್ ಮತ್ತು ಕೋಲುಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಶವ ಪತ್ತೆಯಾದ ಹಿನ್ನೆಲೆ ರಾಜಥಾನಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಥಂಗಮಲೈಯ ಫೋನ್ ಸಿಗ್ನಲ್‌ಗಳನ್ನು ಪರಿಶೀಲಿಸಿದರು. ಇದರಿಂದ ಶಾಲೆಯಿಂದ ಹೊರಬಂದ ಗುಂಪನ್ನು ಗುರುತಿಸಿ ತನಿಖೆಯ ನಂತರ ಶಂಕಿತರನ್ನು ಪತ್ತೆ ಮಾಡಿ ಭಾನುವಾರ ಐವರನ್ನೂ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.
ಸೋಮವಾರ ಎಲ್ಲಾ ಐವರನ್ನೂ ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಿಪಡಿಸಲಾಯಿತು. ಓರ್ ಹಿರಿಯ ಆರೋಪಿ ಅಜಿತ್‌ಕುಮಾರ್‌ನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಅಪ್ರಾಪ್ತರಿಗೆ ಕೌನ್ಸೆಲಿಂಗ್ ನೀಡಿ ಮಧುರೈನ ಸರ್ಕಾರಿ ಗೃಹಕ್ಕೆ ಕಳುಹಿಸಲಾಗಿದೆ. (ಏಜೆನ್ಸೀಸ್)