ಕೇರಳ: ಕಳೆದ ಎರಡು ವಾರಗಳಿಂದ ಮಾಲಿವುಡ್ನಲ್ಲಿ ಕಾಸ್ಟಿಂಗ್ ಕೌಚ್ ಎಂಬ ಮಾಹಾಮಾರಿ ತಾಂಡವವಾಡುತ್ತಿದ್ದು, ಮಲಯಾಳಂ ಚಿತ್ರರಂಗ ದಿಕ್ಕಾಪಾಲಾಗಿದೆ. ಪ್ರತ್ಯೇಕವಾಗಿ ಕೆ. ಹೇಮಾ ಕಮಿಟಿಯ ವರದಿ ಹೊರಬಿದ್ದ ಬಳಿಕ ಇಂಡ್ಟ್ರಸಿಯ ಸ್ಟಾರ್ ನಟಿಮಣಿಯರು ಸೇರಿದಂತೆ ಇನ್ನಿತರರು ತಮಗಾದ ಲೈಂಗಿಕ ಕಿರುಕುಳ ಅನುಭವ ಕುರಿತು ಮುಕ್ತವಾಗಿ ಕ್ಯಾಮರಾ ಮುಂದೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ತೆರೆ ಹಿಂದೆ ನಡೆದ ಹಂಚಿಕೊಳ್ಳಲಾಗದ ವಿಷಯಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಮಾಲಿವುಡ್ನ ಘನತೆ, ಗೌರವಕ್ಕೆ ಕಪ್ಪುಚುಕ್ಕೆ ತಂದಿದೆ. ಇದರ ಬೆನ್ನಲ್ಲೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟ ಮೋಹನ್ ಲಾಲ್ ರಾಜೀನಾಮೆ ಘೋಷಿಸಿದರು. ಸದ್ಯ ಒಬ್ಬರ ಹಿಂದೆ ಮತ್ತೊಬ್ಬರು ಎನ್ನುವಂತೆ ನಟಿಯರು ಸಾಲು ಸಾಲಾಗಿ ತಾವು ಅನುಭವಿಸಿದ ಕಹಿ ಘಟನೆಗಳನ್ನು ಬಟಾಬಯಲು ಮಾಡುತ್ತಿದ್ದು, ಇದೀಗ ಆ ಸಾಲಿಗೆ ಮತ್ತೋರ್ವ ನಟಿಯ ಹೇಳಿಕೆ ಮುನ್ನೆಲೆಗೆ ಬಂದಿದೆ.
ನಟ ನಿವಿನ್ ಪೌಲಿ ವಿರುದ್ಧ ನಟಿಯೊಬ್ಬರು ಇದೀಗ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಕಳೆದ ನವೆಂಬರ್‌ನಲ್ಲಿ ನನ್ನನ್ನು ದುಬೈಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಲಾಯಿತು ಎಂದು ಆಕೆ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ. ಸದ್ಯ ದೂರಿನ ಅನ್ವಯ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ನಿವಿನ್ ಪೌಲಿ ಸೇರಿದಂತೆ ಆರು ಮಂದಿ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ನಿರ್ಮಾಪಕರೂ ಇದ್ದಾರೆ. ಆರೋಪಿಗಳ ಪಟ್ಟಿಯಲ್ಲಿ ನಿವಿನ್ ಪೌಲಿ ಆರನೇ ವ್ಯಕ್ತಿ ಎಂದು ಹೇಳಲಾಗಿದೆ. ನಿವಿನ್ ವಿರುದ್ಧ ದಾಖಲಾಗಿರುವ ಪ್ರಕರಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಮಲಯಾಳಂ ಚಲನಚಿತ್ರೋದ್ಯಮದ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಸದ್ಯ ಭಾರತೀಯ ಚಲನಚಿತ್ರೋದ್ಯಮದಲ್ಲಿ ದೊಡ್ಡ ಸಂಚಲನವನ್ನೇ ಹುಟ್ಟುಹಾಕಿದೆ. ತನ್ನ ವಿರುದ್ಧ ಕೇಳಿಬಂದಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ನಿವಿನ್, "ನಾನು ಯಾರಿಗೋ ಲೈಂಗಿಕ ಕಿರುಕುಳ ನೀಡಿದ್ದೇನೆ ಎಂಬ ಸುದ್ದಿಯನ್ನು ಕೇಳ್ಪಟ್ಟೆ. ಅಸಲಿಗೆ ಆ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ನನ್ನ ಮೇಲಿನ ಆಧಾರರಹಿತ ಆರೋಪಗಳನ್ನು ನಾನು ನಿರಾಕರಿಸುತ್ತೇನೆ. ಅವೆಲ್ಲವೂ ಶುದ್ಧ ಸುಳ್ಳು, ಈ ಬಗ್ಗೆ ನಾನು ಕಾನೂನು ಹೋರಾಟ ನಡೆಸುತ್ತೇನೆ" ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ನಟ ಪೋಸ್ಟ್ ಮಾಡಿದ್ದಾರೆ. ಸದ್ಯಕ್ಕೆ ಮಾಲಿವುಡ್ ಅಂಗಳದಲ್ಲಿ ಕಾಸ್ಟಿಂಗ್ ಕೌಚ್ ಎಂಬ ಪದಕ್ಕೆ ಮುಕ್ತಿ ಸಿಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ,(ಏಜೆನ್ಸೀಸ್).