ಸಾಗರದ ರಾಮನಗರ ಬಡಾವಣೆ ಬಳಿ ಸಾಗರ-ಹೊಸನಗರ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು. ಗಣಪತಿ, ಮಧುಮಾಲತಿ, ಚಂದ್ರಪ್ಪ, ಟಿ.ಪಿ ರಮೇಶ್, ಅನಿಲ್ ಇತರರಿದ್ದರು.  
ನ್ಯೂಸ್

ಒಳಚರಂಡಿ ಕಾಮಗಾರಿ ಶೀಘ್ರ ಆರಂಭ

ಶಿವಕುಮಾರ ಎಸ್.ಪಿ.

ಸಾಗರ: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಒಳಚರಂಡಿ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುತ್ತದೆ. 20 ಕೋಟಿ ರೂ. ಹಣ ಮಂಜೂರಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರದ ರಾಮನಗರ ಬಳಿ ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಯೋಜನೆಯಡಿ ಸಾಗರ-ಹೊಸನಗರ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕಾಮಗಾರಿಗೆ ಸಂಬಂಧಿಸಿ 51 ಜನ ಭೂಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರ ಜತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದೇವೆ. ಮತ್ತೊಮ್ಮೆ ಮಾತನಾಡಿ ಕೆಲಸಕ್ಕೆ ಸಹಕರಿಸುವಂತೆ ವಿನಂತಿಸಲಾಗುವುದು. ಭೂ ಸ್ವಾಧೀನ ಪ್ರಕ್ರಿಯೆಗೆ ಸಹಕರಿಸುವಂತೆ ಕೋರುತ್ತಿದ್ದೇವೆ. ಪರಿಹಾರವನ್ನೂ ನೀಡಲಾಗುತ್ತದೆ ಎಂದರು.

ತ್ಯಾಗರ್ತಿ, ನೀಚಡಿ, ಹಿರೇಬಿಲಗುಂಜಿ ಭಾಗಗಳಲ್ಲಿ ಪವರ್ ಕಟ್ ಹಾಗೂ ವಿದ್ಯುತ್ ಸಮಸ್ಯೆ ಹೆಚ್ಚಿದೆ. ವಿದ್ಯುತ್ ಪರಿವರ್ತಕಗಳು ಸುಟ್ಟುಹೋಗಿವೆ. ವಿಧಾನಸಭಾ ಕ್ಷೇತ್ರದಲ್ಲಿ ಈ ತರಹದ ಸಮಸ್ಯೆ ಹೆಚ್ಚುತ್ತಿದೆ. ಹೆಚ್ಚಿನ ವಿದ್ಯುತ್ ಪರಿವರ್ತಕಗಳನ್ನು ನೀಡುವಂತೆ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.

ಮಂಗನ ಕಾಯಿಲೆ ತಡೆಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕಾಯಿಲೆಗೆ ಸಂಬಂಧಿಸಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್‌ಗಳಿಗೂ ಆರೋಗ್ಯ ಇಲಾಖೆ ಸೂಚಿಸಿರುವ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಸೇವೆ ನೀಡಲಾಗುತ್ತದೆ. ಯಾರೂ ಕಾಡು ಪ್ರವೇಶಿಸದಂತೆ ಸೂಚನೆ ನೀಡಲಾಗಿದೆ. ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲೇ ಮಂಗಗಳು ಮೃತಪಟ್ಟಿದ್ದರೆ ಸ್ಥಳೀಯ ಪಂಚಾಯಿತಿ, ಆರೋಗ್ಯಇಲಾಖೆ, ಅರಣ್ಯ ಇಲಾಖೆ ಗಮನಕ್ಕೆ ತರಬೇಕು ಎಂದರು.

ರಾಮನಗರ ಬಡಾವಣೆ ಮತ್ತು ಕೆಳದಿ ಚನ್ನಮ್ಮ ವೃತ್ತದ ಬಳಿ 11 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ, ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿಗಳಿಗೆ ವಿಶೇಷ ವ್ಯವಸ್ಥೆ, ರಸ್ತೆಯ ಮಧ್ಯದಲ್ಲಿ ಆಕರ್ಷಕ ಸಾಲುದೀಪಗಳನ್ನು ಅಳವಡಿಸಲಾಗುವುದು. ಬೇಸಿಗೆಯಲ್ಲಿ ನಾಗರಿಕರಿಗೆ ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ತ್ಯಾಗರ್ತಿ ಕೆಪಿಸಿ ಇಂಜಿನಿಯರ್ ಜತೆ ಸಭೆ ನಡೆಸಲಾಗಿದೆ ಎಂದರು.

ನಗರಸಭೆ ಸದಸ್ಯರಾದ ಮಧುಮಾಲತಿ, ಗಣಪತಿ, ಚಂದ್ರಪ್ಪ, ಅರಣ್ಯ ಕೈಗಾರಿಗಾ ನಿಗಮದ ವಿಶೇಷ ಕರ್ತವ್ಯ ಅಧಿಕಾರಿ ಟಿ.ಪಿ.ರಮೇಶ್, ಪಿಡಬ್ಲುೃಡಿ ಅಭಿಯಂತ ಅನಿಲ್ ಇತರರಿದ್ದರು.