ಮಹಾರಾಷ್ಟ್ರದಲ್ಲಿ ಬರ ಘೋಷಣೆ 
ನ್ಯೂಸ್

ಮಹಾರಾಷ್ಟ್ರದಲ್ಲಿ ಭೀಕರ ಅನಾವೃಷ್ಟಿ; 265 ತಾಲೂಕುಗಳಲ್ಲಿ ಬರ ಘೋಷಣೆ! |Maharashtra Drought

ಮಳೆಯ ಕೊರತೆಯಿಂದ ಮಹಾರಾಷ್ಟ್ರದ 358 ತಾಲೂಕುಗಳ ಪೈಕಿ 265 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಬರಪೀಡಿತ ರೈತರಿಗೆ ನೆರವಾಗಲು ಹಲವು ಪರಿಹಾರ ಕ್ರಮಗಳನ್ನೂ ತಿಳಿಸಲಾಗಿದೆ.

ಮಹಾರಾಷ್ಟ್ರದ 265 ತಾಲೂಕು ಬರಪೀಡಿತ ಎಂದು ಘೋಷಣೆ

ಒಟ್ಟು 358 ತಾಲೂಕುಗಳ ಪೈಕಿ 265 ತಾಲೂಕುಗಳು ವ್ಯಾಪ್ತಿಗೆ

ಮಳೆ ಕೊರತೆಯಿಂದ ಕುಡಿಯುವ ನೀರಿಗೆ ತೊಂದರೆ, ಬೆಳೆ ಹಾನಿ

Maharashtra Drought: ಮಳೆ ಕೈಕೊಟ್ಟಿರುವ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಒಟ್ಟು 358 ತಾಲೂಕುಗಳ ಪೈಕಿ 265 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ‘ಟ್ರಿಗರ್-1’ ಮಾನದಂಡ ಪೂರೈಸಿದ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ.

ಬರಪೀಡಿತ ಪ್ರದೇಶಗಳಲ್ಲಿ ಬೆಳೆ ನಷ್ಟದ ಸಮೀಕ್ಷೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸಮೀಕ್ಷೆ ಪಾರದರ್ಶಕವಾಗಿರಲು ಬೆಳೆಗಳ ನೈಜ ಸ್ಥಿತಿಯ ಫೋಟೋ ಹಾಗೂ ಜಿಪಿಎಸ್ ಸ್ಥಳದ ಮಾಹಿತಿಯನ್ನು ಕಡ್ಡಾಯವಾಗಿ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪರಿಸ್ಥಿತಿ ಗಂಭೀರ ಎಂದ ಸರ್ಕಾರ

ಮಳೆಯ ಕೊರತೆಯಿಂದ ಹಲವು ಕಡೆ ಬೆಳೆ ಹಾನಿಯಾಗಿದ್ದು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ಎದುರಾಗಿದೆ. ಅದರಲ್ಲೂ ಮರಾಠವಾಡದ ಹಲವು ಭಾಗಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ

ಬರಪೀಡಿತ ಪ್ರದೇಶಗಳಿಗೆ ಸರ್ಕಾರ 12 ಪರಿಹಾರ ಕ್ರಮಗಳನ್ನು ಘೋಷಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕದಲ್ಲಿ ರಿಯಾಯಿತಿ ಹಾಗೂ ಉದ್ಯೋಗ ಖಾತ್ರಿ ಕಾಮಗಾರಿಗಳ ಆರಂಭ ಇದರಲ್ಲಿ ಸೇರಿದೆ. ರೈತರಿಗೆ ಎಷ್ಟು ನೆರವು ನೀಡಬೇಕು ಎಂಬುದನ್ನು ಬೆಳೆ ನಷ್ಟದ ಸ್ಥಳೀಯ ಸಮೀಕ್ಷೆ ಬಳಿಕ ನಿರ್ಧರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಸಮೀಕ್ಷೆ ಬಳಿಕ ನೆರವು

ಬೆಳೆ ನಷ್ಟದ ಸಮೀಕ್ಷೆ ಪೂರ್ಣಗೊಂಡು ವರದಿ ಬಂದ ಬಳಿಕ ರೈತರಿಗೆ ಆದಷ್ಟು ಬೇಗ ನೆರವು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಸದ್ಯ ಜಿಲ್ಲಾಡಳಿತಗಳು ಬೆಳೆ ನಷ್ಟದ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ಆರಂಭಿಸಿವೆ. (ಏಜೆನ್ಸೀಸ್)