ಪಿಲಿಕುಳ ಜೈವಿಕ ಉದ್ಯಾನವನದಿಂದ ಕೆಲವು ಪ್ರಾಣಿಗಳು ನಾಪತ್ತೆ ನಾಪತ್ತೆಯಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಪ್ರಕರಣ ಈಗ ರಾಜ್ಯ ಅರಣ್ಯ ಇಲಾಖೆ ಹಾಗೂ ಕೇಂದ್ರ ಮೃಗಾಲಯ ಪ್ರಾಧಿಕಾರದ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಿಂದ ಕೆಲವು ಪ್ರಾಣಿಗಳು ನಾಪತ್ತೆ ನಾಪತ್ತೆಯಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಪ್ರಕರಣ ಈಗ ರಾಜ್ಯ ಅರಣ್ಯ ಇಲಾಖೆ ಹಾಗೂ ಕೇಂದ್ರ ಮೃಗಾಲಯ ಪ್ರಾಧಿಕಾರದ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ. ಉದ್ಯಾನವನದಲ್ಲಾದ ಅಕ್ರಮಗಳ ಕುರಿತು ಸಮಗ್ರ ವರದಿ ನೀಡುವಂತೆ ಸಿಝಡ್‌ಎ ಪಿಲಿಕುಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪರಿಸರ ಕಾರ್ಯಕರ್ತ ಎಂ. ಭುವನ್ ಅವರು ಜುಲೈ 11 ರಂದು ನೀಡಿರುವ ದೂರಿನ ಪ್ರಕಾರ, 2025ರ ಆಗಸ್ಟ್ 31 ಮತ್ತು ಸೆಪ್ಟೆಂಬರ್ 21ರ ಅವಧಿಯಲ್ಲಿ ಪಿಲಿಕುಳ ಜೈವಿಕ ಉದ್ಯಾನವನದಲ್ಲಿದ್ದ ನಾಲ್ಕು ಕಾಡುನಾಯಿಗಳು ನಾಪತ್ತೆಯಾಗಿವೆ. ಇತರ ಮೃಗಾಲಯಗಳ ಪ್ರಾಣಿಗಳ ಸಂಖ್ಯೆಯ ಲೆಕ್ಕಾಚಾರವನ್ನು ಸರಿದೂಗಿಸಲು ಇವುಗಳನ್ನು ಕಾನೂನುಬಾಹಿರವಾಗಿ ಹಸ್ತಾಂತರಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ದೂರಿನ ಆಧಾರದ ಮೇಲೆ ಜುಲೈ 19 ರಂದು ಪತ್ರ ಬರೆದಿರುವ ಸಿಝಡ್‌ಎ, ಬೆಂಗಳೂರಿನ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಈ ಬಗ್ಗೆ ವಾಸ್ತವಾಂಶ ಒಳಗೊಂಡ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದೆ.
ಪ್ರಕರಣದ ತನಿಖೆ ವೇಳೆ ಸಿಝಡ್‌ಎ ಬಳಿಯಿರುವ ದಾಖಲೆಗಳನ್ನು ಪರಿಶೀಲಿಸಿದಾಗ, ಪಿಲಿಕುಳ ಮೃಗಾಲಯವು ಕಾನೂನಾತ್ಮಕ ನಿಯಮಗಳನ್ನು ಸರಿಜೊತೆಯಾಗಿ ಪಾಲಿಸದಿರುವುದು ಬೆಳಕಿಗೆ ಬಂದಿದೆ. ಮೃಗಾಲಯದ ಅನುಮೋದಿತ ಮಾಸ್ಟರ್ ಪ್ಲಾನ್ ಅವಧಿ ಮುಕ್ತಾಯಗೊಂಡಿದ್ದು, ಪರಿಷ್ಕೃತ ಯೋಜನೆಯನ್ನು ಇನ್ನೂ ಸಲ್ಲಿಸಿಲ್ಲ. 2025ರ ಅಕ್ಟೋಬರ್-ಡಿಸೆಂಬರ್, 2026ರ ಜನವರಿ-ಮಾರ್ಚ್ ಹಾಗೂ ಏಪ್ರಿಲ್-ಜೂನ್ ಅವಧಿಯ ತ್ರೈಮಾಸಿಕ ಇನ್ವೆಂಟರಿ ವರದಿಗಳನ್ನು ನೀಡಲಾಗಿಲ್ಲ. 2025-26ರ ವಾರ್ಷಿಕ ಇನ್ವೆಂಟರಿ ವರದಿ ಮತ್ತು 2021-22 ಹಾಗೂ 2025-26ರ ವಾರ್ಷಿಕ ವರದಿಗಳ ಸಲ್ಲಿಕೆಯೂ ಬಾಕಿ ಉಳಿದಿದೆ ಎಂಬ ಮಾಹಿತಿ ಲಭ್ಯವಾಗಿತ್ತು.
ದಾಖಲೆಯಲ್ಲಿದ್ದದ್ದು 24 ಕಾಡುನಾಯಿಗಳು!
ಸಿಝಡ್‌ಎ ಸದ್ಯ ಹೊಂದಿರುವ ಕೊನೆಯ ವರದಿ (ಜುಲೈ-ಸೆಪ್ಟೆಂಬರ್ 2025) ಪ್ರಕಾರ, ಪಿಲಿಕುಳದಲ್ಲಿ ಒಟ್ಟು 24 ಕಾಡುನಾಯಿಗಳಿದ್ದವು. ಆ ಅವಧಿಯಲ್ಲಿ ಕೇವಲ ಒಂದು ಕಾಡುನಾಯಿ ಮೃತಪಟ್ಟಿತ್ತೇ ಹೊರತು, ಯಾವುದೇ ಪ್ರಾಣಿಯನ್ನು ಬೇರೆಡೆಗೆ ವರ್ಗಾಯಿಸಿದ ಬಗ್ಗೆ ಉಲ್ಲೇಖವಿರಲಿಲ್ಲ. ಹೀಗಿರುವಾಗ 4 ಕಾಡುನಾಯಿಗಳು ಹಠಾತ್ತಾಗಿ ಮಾಯವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆರೋಪಗಳ ಗಂಭೀರತೆಯನ್ನು ಪರಿಗಣಿಸಿರುವ ಸಿಝಡ್‌ಎ, ಪ್ರತಿಯೊಂದು ವಿಷಯಕ್ಕೂ ಸ್ಪಷ್ಟವಾದ ವಿವರಣೆ ನೀಡುವಂತೆ ಮೃಗಾಲಯದ ಆಡಳಿತ ಮಂಡಳಿಗೆ ತಿಳಿಸಿದೆ. ಪತ್ರ ತಲುಪಿದ 10 ದಿನಗಳ ಒಳಗೆ ಬಾಕಿ ಇರುವ ಎಲ್ಲ ವರದಿಗಳು, ಪರಿಷ್ಕೃತ ಮಾಸ್ಟರ್ ಪ್ಲಾನ್ ಮತ್ತು ಸತ್ಯಾಸತ್ಯತೆಯ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.