ಬೆಂಗಳೂರು: ವಿದ್ಯುನ್ಮಾನ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆ (ಇಎಸ್‌ಡಿಎಂ) ವಲಯದಲ್ಲಿ 5,500 ಕೋಟಿ ರೂ. ಹೂಡಿಕೆ, 7,200 ಉದ್ಯೋಗಗಳು ಸೃಷ್ಟಿ ಹಾಗೂ ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ವಲಯದಲ್ಲಿ 1,600 ಕೋಟಿ ರೂ. ಹೂಡಿಕೆ, 2,500 ಉದ್ಯೋಗಗಳ ಸೃಷ್ಟಿ ಒಪ್ಪಂದಗಳಾಗಿದ್ದು, ಅಮೆರಿಕ ಪ್ರವಾಸ ಯಶಸ್ವಿಯಾಗಿದೆ ಎಂದು ಕಿಯೋನಿಕ್ಸ್ ಅಧ್ಯಕ್ಷ, ಶಾಸಕ ಶರತ್ ಬಚ್ಚೇಗೌಡ ಮಾಹಿತಿ ನೀಡಿದರು.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸಮಕ್ಷಮ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ರೋಡ್ ಶೋ, ಸಂವಾದ, ಸಭೆಗಳು, ಸಮಾಲೋಚನೆ ಹಾಗೂ ಭೇಟಿ ಉದ್ದೇಶಿತ ಅಧಿಕೃತ 10 ದಿನಗಳ ಪ್ರವಾಸ ಯಶಸ್ವಿಯಾಗಿದೆ ಎಂದರು.
ನಿಯೋಗದ ನೇತೃತ್ವವಹಿಸಬೇಕಿದ್ದ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಕೇಂದ್ರ ಸರ್ಕಾರ ಅನುಮತಿ ನೀಡುವಲ್ಲಿ ತಾರತಮ್ಯ, ವಿಳಂಬದಿಂದ ಅಮೆರಿಕ ಪ್ರವಾಸಕ್ಕೆ ಬರಲಾಗಲಿಲ್ಲ. ಅವರೂ ನಿಯೋಗದ ಜತೆಗಿದ್ದರು ಇನ್ನಷ್ಟು ಹೆಚ್ಚಿನ ಬಂಡವಾಳ ಹೂಡಿಕೆ ನಿರೀಕ್ಷಿಸಬಹುದಾಗಿತ್ತು ಎಂದು ಹೇಳಿದರು.
ಪ್ರವಾಸದ ಅವಧಿಯಲ್ಲಿ ಬೋಸ್ಟನ್, ನ್ಯೂಯಾಕ್‌ರ್, ಸ್ಯಾನ್‌ರ್ಾನ್ಸಿಸ್ಕೋ ನಗರಗಳು, ಎರಡು ವಿವಿಗಳಿಗೆ ಭೇಟಿ ನೀಡಲಾಯತು. ರೋಡ್ ಶೋಗಳು, ಎರಡು ಸಮ್ಮೇಳನಗಳು, ಮೂರು ಸತ್ಕಾರ ಕೂಟಗಳು, ವಿವಿಧ ಕಂಪನಿಗಳ ಜತೆಗೆ 120ಕ್ಕೂ ಹೆಚ್ಚು ಸರಣಿ ಸಭೆಗಳಾಗಿವೆ ಎಂದು ವಿವರಿಸಿದರು.
ಪ್ರವಾಸದ ಅವಧಿಯುದ್ದಕ್ಕೂ ಬೆಂಗಳೂರು ಜಾಗತಿಕ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕೆಲ ಕಂಪನಿಗಳು ಹೊಸದಾಗಿ ಹೂಡಿಕೆಗೆ ಉತ್ಸುಕತೆ ತೋರಿಸಿದರೆ, ಹಾಲಿ ಕಂಪನಿಗಳು ಸಾಮರ್ಥ್ಯ ವಿಸ್ತರಣೆಗೆ ಒಲವು ವ್ಯಕ್ತಪಡಿಸಿದವು ಎಂದು ಶರತ್ ಬಚ್ಚೇಗೌಡ ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಪರಸ್ಪರ ಒಡಂಬಡಿಕೆ, ಹೂಡಿಕೆ ಹಾಗೂ ಉದ್ಯೊಗ ಸೃಷ್ಟಿ ನಿರೀಕ್ಷೆಗೆ ಈ ಪ್ರವಾಸ ಸೀಮಿತವಾಗದು. ಆಗಿರುವ ಒಪ್ಪಂದಗಳಂತೆ ಬಂಡವಾಳ ಹರಿದು ಬಂದು ಯೋಜನೆಗಳು ಕಾರ್ಯಗತವಾಗಿ, ಉದ್ಯೋಗಗಳು ಸೃಷ್ಟಿಯಾಗಬೇಕು.
ಇದಕ್ಕಾಗಿ ಇಲಾಖೆಯಲ್ಲೇ ಅಧಿಕಾರಿಗಳ ಕಾರ್ಯತಂಡಗಳನ್ನು ರಚಿಸಲಿದ್ದೇವೆ. ಪ್ರವಾಸದ ವೇಳೆ ಚರ್ಚಿಸಿದ ಎಲ್ಲ ಕಂಪನಿಗಳ ಜತೆಗೆ ನಿರಂತರ ಸಂಪರ್ಕ, ಮಾತುಕತೆ, ಯೋಜನೆ ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳುವುದು ಈ ತಂಡಗಳ ಜವಾಬ್ದಾರಿಯಾಗಿದೆ ಎಂದು ವಿವರಿಸಿದರು.