ಹೊಳೆನರಸೀಪುರ: ಪಟ್ಟಣದ ಮುಸ್ಲಿಂ ಬಡಾವಣೆ ಸೇರಿದಂತೆ ಬಸವನಗುಡಿ ಬೀದಿಯಲ್ಲಿ ಬೀದಿ ನಾಯಿಗಳು ದಾಳಿ ನಡೆಸಿ, ನಾಲ್ಕು ಮಕ್ಕಳು ಸೇರಿದಂತೆ ಒಟ್ಟು ಏಳು ಜನರನ್ನು ಗಾಯಗೊಳಿಸಿದೆ.
ರಾಯನ್ ಖಾನ್, ಮಹಮ್ಮದ್ ಸಾಧಿಲ್, ಜುಬ್ಬರ್ ಉಲ್ಲಾ, ಪುಷ್ಪಾ, ಲೋಹಿತಾಶ್ವ, ಹರ್ಮನ್ ಹಾಗೂ ಶಾಯಿಜ್ ಬೀದಿನಾಯಿ ದಾಳಿಯಿಂದ ಗಾಯಗೊಂಡವರು.
ಪಟ್ಟಣದಲ್ಲಿ ಮಂಗಳವಾರ ರಾತ್ರಿ ಲಷ್ಕರ್ ಮೊಹಲ್ಲಾದ ವಿವಿಧ ರಸ್ತೆಗಳು, ಮುಸ್ಲಿಂ ಬಡಾವಣೆಗೆ ಹೊಂದಿಕೊಂಡಂತಿರುವ ಬಸವನಗುಡಿ ಬೀದಿಯಲ್ಲಿ ಬೀದಿ ನಾಯಿಯೊಂದು ನಾಲ್ಕು ಮಕ್ಕಳು ಸೇರಿದಂತೆ ಒಟ್ಟು ಏಳು ಜನರ ಮೇಲೆ ದಾಳಿ ನಡೆಸಿದೆ. ವಿಪರೀತ ಸೆಖೆ ಹಾಗೂ ರಂಜಾನ್ ಪ್ರಯುಕ್ತ ಉಪವಾಸ ಮಾಡುವ ಕುಟುಂಬ ಸದಸ್ಯರು ಮಸೀದಿಯಿಂದ ಮನೆಗೆ ಬರುವುದನ್ನು ಕಾಯುತ್ತಾ ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಮಕ್ಕಳು ಸೇರಿದಂತೆ 7 ಜನರು ಬೀದಿನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದಿದ್ದಾರೆ.
ನಾಯಿ ದಾಳಿಗೆ ಒಳಗಾದ ನಾಲ್ಕು ಮಕ್ಕಳು ಒಳಗೊಂಡಂತೆ ಏಳು ಜನರಿಗೆ ಚುಚ್ಚುಮುದ್ದು ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಧನುಶೇಖರ್ ತಿಳಿಸಿದ್ದಾರೆ.