ನ್ಯೂಸ್

7 killed In Truck-Car Accident; ದೇವರ ದರ್ಶನ ಮುಗಿಸಿ ವಾಪಸ್​ ಆಗುತ್ತಿದ್ದವರು ಸೇರಿದ್ದು ಮಸಣಕ್ಕೆ

ಅಹಮದಾಬಾದ್: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿರುವ ಘಟನೆ ಗುಜರಾತ್​ನ ಸಬರ್​ಕಾಂತಾ ಜಿಲ್ಲೆಯಲ್ಲಿ ನಡೆದಿದೆ. ಸೆಪ್ಟೆಂಬರ್​ 25ರ ಮುಂಜಾನೆ 6 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಜಯ್​ ಪಟೇಲ್​, ಅರಾವಳಿ ಜಿಲ್ಲೆಯಲ್ಲಿರುವ ಶಾಮಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಅಹಮದಾಬಾದ್‌ಗೆ ಹಿಂತಿರುಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, ಕಾರಿನಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದರು. ಕಾರು ಹಿಮ್ಮತ್‌ನಗರ ಪ್ರದೇಶದ ಸಹಕಾರಿ ಗಿರಣಿ ಬಳಿ ಬಂದಾಗ ಟ್ರಕ್​ನ ಹಿಂಬದಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಕಟ್ಟರ್​ ಬಳಸಿ ಕಾರಿನಿಂದ ಶವಗಳನ್ನು ಹೊರತೆಗೆದಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ ಅತಿವೇಗ ಮತ್ತು ಚಾಲಕ ನಿದ್ದೆಗೆ ಜಾರಿದ್ದೆ ಅಪಘಾತಕ್ಕೆ ಮುಖ್ಯ ಕಾರಣ ಎಂದು ತಿಳಿದು ಬಂದಿದ್ದು, ಟ್ರಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಕಾರು ಮುಂಭಾಗದಿಂದ ತೀವ್ರವಾಗಿ ನಜ್ಜುಗುಜ್ಜಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಜಯ್​ ಪಟೇಲ್ ತಿಳಿಸಿದ್ದಾರೆ.