Award ceremony, official ceremony tomorrow 
ನ್ಯೂಸ್

ಏಳು ಸಾಧಕರಿಗೆ ಕೆ.ವಿ.ಶಂಕರಗೌಡ ಸಮಾಜ ಸೇವಾ ಪ್ರಶಸ್ತಿ

ಮಾಜಿ ಶಿಕ್ಷಣ ಸಚಿವ, ಸಹಕಾರಿ ಧುರೀಣ, ಕುವೆಂಪು ಅವರಿಂದ ‘ನಿತ್ಯಸಚಿವ’ ಎಂಬ ಗೌರವಕ್ಕೆ ಪಾತ್ರರಾಗಿದ್ದ ಕೆ.ವಿ. ಶಂಕರಗೌಡ ಸ್ಮರಣಾರ್ಥ ಅದಮ್ಯ ರಂಗಶಾಲೆಯ ವತಿಯಿಂದ ನೀಡಲಾಗುವ ‘ಕೆ.ವಿ.ಶಂಕರಗೌಡ ಸಮಾಜ ಸೇವಾ ಪ್ರಶಸ್ತಿ’ಗೆ ವಿವಿಧ ಕ್ಷೇತ್ರದ ಏಳು ಮಂದಿ ಸಾಧಕರು ಆಯ್ಕೆಯಾಗಿದ್ದಾರೆ ಎಂದು ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರ ಮಂಡ್ಯ ತಿಳಿಸಿದ್ದಾರೆ.

ಹಿರಿಯ ಪತ್ರಕರ್ತ ಸಿ.ಕೆ.ಮಹೇಂದ್ರ, ಶ್ರೀರಂಗಪಟ್ಟಣದ ಡಿವೈಎಸ್‌ಪಿ ಶಾಂತಮಲ್ಲಪ್ಪ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು, ಬೆಂಗಳೂರಿನ ರಾಜ್ಯ ಖಜಾನೆ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ವಿ.ಭಾಗ್ಯಲಕಿಕ್ಷ್ಮ, ಮೈಸೂರು ಕೆಐಎಡಿಬಿ ಅಧ್ಯಕ್ಷ ಕೆ.ಬಿ.ಲಿಂಗರಾಜು, ಸಿನಿಮಾ ಬರಹಗಾರ ಮಂಡ್ಯದ ಲೋಕೇಶ್‌ಗೌಡ, ಮೈಸೂರಿನ ಯುವ ಉದ್ಯಮಿ ಸಂಜಯ್ ಹೆಬ್ಬಾರ್ ಪ್ರಶಸ್ತಿಗೆ ಆಯ್ಕೆಯಾಗಿರುವ ಗಣ್ಯರಾಗಿದ್ದಾರೆ.

ನಗರದ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಮೇ 6ರಂದು ಸಂಜೆ 5.30 ಗಂಟೆಗೆ ನಡೆಯಲಿರುವ ‘ಬಾಲಂಗೋಚಿ’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಾಸಕ ಜಿ.ಟಿ.ದೇವೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಮಾರಂಭವನ್ನು ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಉದ್ಘಾಟಿಸಲಿದ್ದು, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಅಧ್ಯಕ್ಷತೆ ವಹಿಸುವರು.

ಪ್ರಶಸ್ತಿ ಪುರಸ್ಕೃತ ಸಾಧಕರನ್ನು ಕುರಿತು ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ.ಸತೀಶ್ ಜವರೇಗೌಡ ಅಭಿನಂದನಾ ನುಡಿಗಳನ್ನಾಡಲಿದ್ದು, ಮಂಗಳೂರು ವಲಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್‌ಗೌಡ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮ್, ಪಡುವಾರಳ್ಳಿ ಗ್ರಾಮಾಭ್ಯುದಯ ಟ್ರಸ್ಟ್ ಅಧ್ಯಕ್ಷ ಮೆಲ್ಲಹಳ್ಳಿ ಮಹಾದೇವಸ್ವಾಮಿ ಭಾಗವಹಿಸಲಿದ್ದಾರೆ.

ಸಮಾರಂಭದ ಬಳಿಕ ಬೇಸಿಗೆ ಶಿಬಿರದ ಮಕ್ಕಳಿಂದ ನಾಟಕ ಮತ್ತು ನೃತ್ಯ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.