ಬೆಂಗಳೂರು: ಸೇವಾದಳ ಕಾಂಗ್ರೆಸ್ ಆಧಾರಸ್ತಂಭ(Seva Dal is the pillar of Congress). ಪಕ್ಷದಲ್ಲಿ ನೀವು ಎಲ್ಲರಿಗಿಂತ ಕೊನೆ ಎಂಬ ಭಾವನೆ ಬೇಡ. ತಾಲೂಕು, ಜಿಲ್ಲಾ ಮಟ್ಟದಲ್ಲಿ ಸೇವಾದಳದವರಿಗೂ ಅಧಿಕಾರ ನೀಡುವ ಆಲೋಚನೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್(DK Shivakumar) ತಿಳಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಭಾರತ್ ಜೋಡೋ ಭವನದಲ್ಲಿ ಭಾನುವಾರ ನಡೆದ ಭಾರತೀಯ ಸೇವಾದಳದ ರಾಜ್ಯ ಮಟ್ಟದ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.
ಸಮಾಜ, ಸೇವೆ ಮಾಡುವವರನ್ನು ಹೆಚ್ಚು ಗುರುತಿಸುತ್ತದೆ. ಹೀಗಾಗಿ ನಮ್ಮ ಸಮಾಜದಲ್ಲಿ ರಾಮನ ತಂದೆ ದಶರಥ ಮಹಾರಾಜನಿಂಗಿಂತ, ರಾಮನ ಭಂಟ ಹನುಮಂತನ ದೇವಾಲಯಗಳು ಹೆಚ್ಚಾಗಿವೆ. ಅದೇ ರೀತಿ ನೀವು ಕಾಂಗ್ರೆಸ್‌ಗೆ ಆಧಾರಸ್ತಂಭ. ಇದನ್ನು ಸೇವಾದಳದ ಎಲ್ಲ ಕಾರ್ಯಕರ್ತರು ತಲೆಯಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಸೇವಾದಳ ಕಾಂಗ್ರೆಸ್ ಕಡೆಯ ಅಂಗ, ನಮ್ಮನ್ನು ಗುರುತಿಸುವುದಿಲ್ಲ ಎಂಬ ಆಲೋಚನೆಯನ್ನು ನಿಮ್ಮ ತಲೆಯಿಂದ ಕಿತ್ತೊಗೆಯಬೇಕು. ನಿಮ್ಮಲ್ಲಿ ನಾಯಕತ್ವದ ಗುಣ ಇದೆ ಎಂದು ನೆಹರೂ ಹಾಗೂ ಇಂದಿರಾ ಗಾಂಧಿ ಅವರೇ ಸೇವಾದಳದ ಅಧ್ಯಕ್ಷ ಸ್ಥಾನ ವಹಿಸಿದ್ದರು ಎಂದರು.
ಬಿ.ಕೆ. ಹರಿಪ್ರಸಾದ್ ಅವರು ರಾಷ್ಟ್ರೀಯ ಸೇವಾದಳದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸಂಸತ್ ಸದಸ್ಯರಾಗಿದ್ದರು. ಇನ್ನು ಅನೇಕರು ಸೇವಾದಳದಲ್ಲಿ ಕೆಲಸ ಮಾಡಿದ್ದಾರೆ. ಅವರು ಶಾಸಕರು, ಮಂತ್ರಿಗಳಾಗಿ ದೊಡ್ಡ ನಾಯಕರಾಗಿ ಬೆಳೆದಿದ್ದಾರೆ ಎಂದು ತಿಳಿಸಿದರು.
ನೀವು ಶಾಸಕರು, ಮಂತ್ರಿ, ಮುಖ್ಯಮಂತ್ರಿ ಆಗಬಹುದು. ನೀವು ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಒಳ್ಳೆಯ ಕಾಲ ಬರುತ್ತಿದೆ. ಬ್ಲಾಕ್ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಅವರು ಹಾಗೂ ರಾಹುಲ್ ಗಾಂಧಿ ಅವರು ಜಿಲ್ಲಾ ಕಾಂಗ್ರೆಸ್ ಗೆ ಹೊಸ ಸ್ವರೂಪ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಭಾರತ ಜೋಡೋ ಸಂದರ್ಭದಲ್ಲಿ ನಾವು ಅನೇಕ ಜಾಗಗಳನ್ನು ಗುರುತಿಸಿದ್ದು, ಶಾಶ್ವತ ಕಾಂಗ್ರೆಸ್ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ಮಂಗಳೂರಿನಲ್ಲೂ ಜಾಗ ನೋಡಿದ್ದೇವೆ. ಇದರ ಜವಾಬ್ದಾರಿಯನ್ನು ಸೇವಾದಳದವರಿಗೂ ವಹಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸೇವಾದಳದವರಿಗೆ ಎಷ್ಟು ಸಾಧ್ಯವೋ ಅಷ್ಟು ಅಧಿಕಾರ ನೀಡಲಾಗುವುದು. ಕೆಲವು ನಾಯಕರು ನಿಮ್ಮನ್ನು ಅಗೌರವವಾಗಿ ನಡೆಸಿಕೊಳ್ಳುವುದನ್ನು ನೋಡಿದ್ದೇವೆ. ಸೂಕ್ತ ಕಾಲದಲ್ಲಿ ಅವರಿಗೆ ಸೂಕ್ತ ಸಂದೇಶ ರವಾನಿಸಲಾಗುವುದು. ಸೇವಾದಳದಲ್ಲೂ ಬೂತ್ ಮಟ್ಟದಲ್ಲಿ ಪ್ರತಿನಿಧಿಗಳನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು.
ನಮ್ಮ ಸರ್ಕಾರ ಪ್ರತಿ ಬಡ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಗ್ಯಾರಂಟಿ ಯೋಜನೆಗಳ ಮೂಲಕ ವರ್ಷಕ್ಕೆ 52 ಸಾವಿರ ಕೋಟಿ ಒದಗಿಸಲಾಗಿದೆ. ಯಾರು ಏನೇ ಕೂಗಾಡಲಿ ರಾಜ್ಯದಲ್ಲಿ ಮತ್ತೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.