ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ 50:50 ಅನುಪಾತ, ಬದಲಿ ನಿವೇಶನ ಹಂಚಿಕೆ ಎಂಬ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣದ ಬಳಿಕ ಇದೀಗ ‘ಸೆಟ್ಲ್‌ಮೆಂಟ್ ಡೀಡ್’ ಎಂಬ ಮತ್ತೊಂದು ಹೊಸ ಅಕ್ರಮ ಬೆಳಕಿಗೆ ಬಂದಿದೆ.
ಪ್ರಾಧಿಕಾರದಿಂದ ಪಡೆದ ನಿವೇಶನಗಳನ್ನೇ ಪ್ರಭಾವಿಗಳ ಆಪ್ತರಿಗೆ ಲಂಚದ ರೂಪದಲ್ಲಿ ವಾಪಸ್ ನೀಡುವುದು, ಅದಕ್ಕೆ ‘ಸೆಟ್ಲ್‌ಮೆಂಟ್ ಡೀಡ್’ ಎಂದು ಹೆಸರು ಕೊಟ್ಟು ಸರ್ಕಾರಕ್ಕೂ ತೆರಿಗೆ ವಂಚಿಸಲಾಗಿದೆ.
ಕೋಟಿ ರೂಪಾಯಿ ಮೌಲ್ಯದ ನಿವೇಶನಗಳನ್ನು ಬಳುವಳಿಯಾಗಿ ಪಡೆದವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತನ ಸಂಬಂಧಿ ಹಾಗೂ ಮೈಸೂರು ಭಾಗದ ಪ್ರಭಾವಿ ಸಚಿವರ ಸಂಬಂಧಿಯ ಹೆಸರೂ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತನ ಸಂಬಂಧಿ, ಮೈಸೂರು ತಾಲೂಕಿನ ಬೀರಿಗೌಡನಹುಂಡಿ ನಿವಾಸಿ ಎಸ್.ಶಿವಣ್ಣ ಅವರಿಗೆ ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್ ವಿಜಯನಗರ 4ನೇ ಹಂತದಲ್ಲಿ 12*8 ಚದರ ಮೀಟರ್ ಅಳತೆಯ ನಿವೇಶನವನ್ನು (ನಂ.11809/ಎ) ನೋಂದಣಿ ಮಾಡಿಕೊಟ್ಟಿದ್ದಾರೆ. 2024ರ ಮೇ 22ರಂದು ಈ ಸೆಟ್ಲ್‌ಮೆಂಟ್ ಡೀಡ್ ನೋಂದಣಿ ಆಗಿದ್ದು, ಸರ್ಕಾರಕ್ಕೆ ಒಟ್ಟು 5.03 ಲಕ್ಷ ರೂ. ಶುಲ್ಕ ಪಾವತಿಸಲಾಗಿದೆ. ಸೆಟ್ಲ್‌ಮೆಂಟ್ ಆಗಿರುವ ಕಾರಣ ನಿವೇಶನದ ಮೌಲ್ಯವನ್ನು ನಮೂದಿಸಿಲ್ಲ.
ಪ್ರಭಾವಿ ಸಚಿವರೊಬ್ಬರ ಸಹೋದರನ ಪುತ್ರ ನವೀನ್ ಬೋಸ್ ಎಂಬವರಿಗೂ ವಿಜಯನಗರ 4ನೇ ಹಂತದಲ್ಲಿ ಹೀಗೆ ನಿವೇಶನವೊಂದನ್ನು ನೋಂದಣಿ ಮಾಡಿಕೊಡಲಾಗಿದೆ. ಒಂದೊಂದು ನಿವೇಶನದ ಮೌಲ್ಯವೂ ಕೋಟಿ ರೂಪಾಯಿಗಳ ಲೆಕ್ಕದಲ್ಲಿದೆ.
ಸೆಟ್ಲ್‌ಮೆಂಟ್ ಡೀಡ್ ಎನ್ನುವುದು ಆಸ್ತಿ ನೋಂದಣಿಗೆ ದಾನಪತ್ರದಂತೆಯೇ ಇರುವ ಇನ್ನೊಂದು ಮಾರ್ಗ. ಇಲ್ಲಿ ಒಬ್ಬ ವ್ಯಕ್ತಿಯು ತನ್ನ ಹತ್ತಿರದ ಬಂಧುಗಳಿಗೆ ತನ್ನ ಆಸ್ತಿಯ ಹಕ್ಕನ್ನು ವರ್ಗಾಯಿಸಬಹುದು. ಕೆಲವೊಮ್ಮೆ ವ್ಯಾವಹಾರಿಕ ಪಾಲುದಾರಿಕೆ ಸಂಬಂಧಿಸಿದಂತೆಯೂ ಒಬ್ಬರು ಇನ್ನೊಬ್ಬರಿಗೆ ಆಸ್ತಿಯ ಹಕ್ಕನ್ನು ಬಿಟ್ಟುಕೊಡಬಹುದು. ಇದರಲ್ಲಿ ಹಣಕಾಸಿನ ವ್ಯವಹಾರದ ಪ್ರಸ್ತಾವ ಇರುವುದಿಲ್ಲ. ಆದರೆ, ಈ ಮಾರ್ಗವನ್ನೇ ದುರ್ಬಳಕೆ ಮಾಡಿಕೊಂಡು ಕೊಡುಕೊಳ್ಳುವ ಹಣಕಾಸಿನ ವ್ಯವಹಾರವನ್ನೇ ಉಲ್ಲೇಖಿಸದೆ ವಂಚಿಸಲಾಗುತ್ತದೆ ಎಂದು ಹೇಳುತ್ತಾರೆ ನಿವೃತ್ತ ಅಧಿಕಾರಿಯೊಬ್ಬರು.
ಮುಡಾದಿಂದಲೇ ಬಳುವಳಿ: ಹೀಗೆ ಪ್ರಭಾವಿಗಳ ಆಪ್ತರಿಗೆ ನೋಂದಣಿ ಆಗುತ್ತಿರುವ ನಿವೇಶನಗಳು ಈ ಹಿಂದೆ ಮುಡಾದಿಂದಲೇ ರಿಯಲ್ ಎಸ್ಟೇಟ್ ಉದ್ಯಮಿಗೆ ಮಂಜೂರಾದ ಬದಲಿ ನಿವೇಶನಗಳು ಎಂಬುದು ವಿಶೇಷ. ಬೆಂಗಳೂರಿನ ಡಾಲರ್ಸ್ ಕಾಲನಿ ನಿವಾಸಿ ಮಂಜುನಾಥ್ ಮುಡಾದಿಂದ ಒಟ್ಟು 24 ಬದಲಿ ನಿವೇಶನಗಳನ್ನು ಪಡೆದಿದ್ದರು. ಅದರಲ್ಲಿ ಕೆಲವನ್ನು ರಾಜಕಾರಣಿಗಳ ಆಪ್ತರಿಗೆ ಸೆಟ್ಲ್‌ಮೆಂಟ್ ಡೀಡ್ ಹೆಸರಿನಲ್ಲಿ ಹಂಚಿದ್ದಾರೆ ಎನ್ನಲಾಗಿದೆ.