ಬೆಂಗಳೂರು: ತಹಸೀಲ್ದಾರ್ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಭೂಮಿ ವ್ಯಾಜ್ಯಗಳನ್ನು 3 ತಿಂಗಳಲ್ಲಿ ಇತ್ಯರ್ಥಪಡಿಸಬೇಕೆಂದು(settle land disputes in tehsildar court within 3 months) ಕಂದಾಯ ಸಚಿವ ಕೃಷ್ಣ ಬೈರೇಗೌಡ(Krishna Bairegowda)ಸೂಚಿಸಿದರು.
ವಿಕಾಸಸೌಧದಲ್ಲಿ ಬಹರ್ ಹುಕ್ಕುಂ ಅರ್ಜಿ, ಪೋಡಿ ಮತ್ತು ಕಂದಾಯ ನ್ಯಾಯಾಲಯ ಪ್ರಕರಣಗಳ ಪ್ರಗತಿ ಕುರಿತು ವೀಡಿಯೋ ಸಂವಾದ ನಡೆಸಿ ಮಾತನಾಡಿದರು.
ಭೂಮಿ ವ್ಯಾಜ್ಯ ಮೂರು ತಿಂಗಳಲ್ಲಿ ಇತ್ಯರ್ಥಪಡಿಸಲು ಸರ್ಕಾರದ ಸೂಚನೆಯಿದೆ. ಆದರೂ ವಿಲೆಗೆ ವರ್ಷಗಳನ್ನು ತೆಗೆದುಕೊಳ್ಳುವುದು ವಾಡಿಕೆಯಾಗಿದೆ. ಹಿಂದಿನ ಸರ್ಕಾರದ ಅವಧಿ ಕೊನೆಗೆ ಇಂತಹ 3 ತಿಂಗಳ ಅವಧಿ ಮೀರಿರುವ 10,774 ಪ್ರಕರಣಗಳನ್ನು ವಿಲೆ ಮಾಡದೆ ಬಾಕಿ ಇರಿಸಲಾಗಿತ್ತು. ಈ ರೀತಿಯ ವಿಳಂಬ ಅನವಶ್ಯಕವಾಗಿ ಸರ್ಕಾರಿ ಕಚೇರಿಗಳಿಗೆ ಸುತ್ತುವುದರಿಂದ ರೈತರಿಗೆ ಹೇಳತೀರದ ಬವಣೆ ನೀಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ಇವುಗಳನ್ನು ಆಂದೋಲನ ಮಾದರಿಯಲ್ಲಿ ವಿಲೆ ಮಾಡುತ್ತಿದೆ. 3 ತಿಂಗಳು ಮೀರಿದ 692 ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಈ ಪ್ರಕರಣಗಳನ್ನು ಡಿಸೆಂಬರ್‌ನಲ್ಲಿ ವಿಲೆ ಮಾಡಿ, ಯಾವುದೇ ಪ್ರಕರಣ 3 ತಿಂಗಳಿಗೆ ಮೀರಿದ ಹಾಗೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ರಾಜ್ಯದಲ್ಲಿ 30 ವರ್ಷಗಳಿಂದ ಮಂಜೂರಾಗಿರುವ ಸರ್ಕಾರಿ ಜಮೀನುಗಳು ಪೊಡಿಯಾಗದೆ ಲಕ್ಷಾಂತರ ರೈತರಿಗೆ ಆಗುತ್ತಿರುವ ಸಮಸ್ಯೆ ಪರಿಹರಿಸಲು ದುರಸ್ತಿ ಪೋಡಿ ಅಭಿಯಾನ ಆರಂಭಿಸಿದ್ದು, 29,778 ಸರ್ವೆ ನಂಬರ್‌ಗಳಿಗೆ 1-5 ಕಡತ ತಯಾರಿಸಲಾಗಿದೆ. ಇವುಗಳಲ್ಲಿ 11,436 ರೈತರ ಜಮೀನುಗಳನ್ನು ಸರ್ವೆ ಮಾಡಲು ಆದೇಶಿಸಲಾಗಿದೆ. ಡಿಸೆಂಬರ್ ಅಂತ್ಯದಲ್ಲಿ 50,000 ರೈತರ ಜಮೀನುಗಳನ್ನು ಸರ್ವೆಗೆ ಆದೇಶಿಸಲು ಸೂಚನೆ ನೀಡಲಾಗಿದೆ. ಇದರಿಂದ ದಶಕಗಳಿಂದ ಬಾಕಿಯಿದ್ದ ರೈತರ ದುರಸ್ಥು ಸಮಸ್ಯೆಯನ್ನು ಬಗೆಹರಿಸಲು ಈಗ ನಿರ್ಣಯಕ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬಗರ್ ಹುಕ್ಕುಂನಲ್ಲಿ ಈಗಾಗಲೇ 1000 ರೈತರ ಅರ್ಜಿಗಳನ್ನು ಶಾಸಕರ ನೇತೃತ್ವದ ಸಮಿತಿಗಳಿಗೆ ಮಂಡಿಸಲಾಗಿದ್ದು, ಡಿಸೆಂಬರ್ 15 ರೊಳಗೆ 5,000 ರೈತರ ಅರ್ಜಿಗಳನ್ನು ಸಮಿತಿಗಳಿಗೆ ಮಂಡಿಸಲು ನಿರ್ದೇಶನ ನೀಡಲಾಗಿದೆ. ಫೆಬ್ರವರಿ ಅಂತ್ಯದೊಳಗೆ ಎಲ್ಲ ಅರ್ಹ ಅರ್ಜಿಗಳನ್ನು ಸಮಿತಿಗೆಳಿಗೆ ಮಂಡಿಸಲು ತಿಳಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.