| ರಾಘವ ಶರ್ಮ ನಿಡ್ಲೆ
ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಕರೊನಾ ವೈರಸ್ ವ್ಯಾಪಕವಾಗಿ ಹಬ್ಬಿಕೊಂಡಿರುವ ಭಯದ ಮಧ್ಯೆ ಕಳೆದೆರಡು ತಿಂಗಳಲ್ಲಿ 11 ಬಾರಿ ಭೂಕಂಪ ಸಂಭವಿಸಿರುವುದು ಜನರನ್ನು ಮತ್ತಷ್ಟು ಆತಂಕದಲ್ಲಿ ದಿನ ಕಳೆಯುವಂತೆ ಮಾಡುತ್ತಿದೆ. ಬುಧವಾರ ರಾತ್ರಿ ದೆಹಲಿ ರಾಜಧಾನಿ ಪ್ರದೇಶ (ಎನ್ಸಿಆರ್) ವ್ಯಾಪ್ತಿಗೊಳಪಟ್ಟಿರುವ ನೋಯ್ಡಾ ಲಘು ಭೂಕಂಪನಕ್ಕೆ ಸಾಕ್ಷಿಯಾಗಿದೆ. ಮೇ 29ರಂದು ಒಂದೇ ದಿನ ಎರಡು ಬಾರಿ ದೆಹಲಿ ಕಂಪಿಸಿ, ರಿಕ್ಟರ್ ಮಾಪನದಲ್ಲಿ 4.5 ಪ್ರಮಾಣ ದಾಖಲಾಗಿತ್ತು. ಜೂನ್ 3ರಂದು ಭಾರತ-ಬಾಂಗ್ಲಾ ಗಡಿ ಭಾಗ ಸೊಹ್ರಾದಲ್ಲಿ ಸಂಭವಿಸಿದ ಭೂಕಂಪನ ಪ್ರಮಾಣ 4.3. ಈಚಿನ ದಿನಗಳಲ್ಲಿ ಕಂಪನದ ಪ್ರಮಾಣ ಹೆಚ್ಚಿರುವುದು ಬಹುದೊಡ್ಡ ಅಪಾಯದ ಸೂಚನೆಯೇ ಎಂಬ ಸಂದೇಹ ದೆಹಲಿ ಜನರನ್ನು ಕಾಡಲಾರಂಭಿಸಿದೆ. ಒಂದುವೇಳೆ, ದೆಹಲಿ ಭೂಕಂಪ ಪ್ರಮಾಣ 6 ದಾಟಿದಲ್ಲಿ ಹಲವಾರು ಕಟ್ಟಡಗಳು ನೆಲಸಮಗೊಳ್ಳುವುದು ನಿಶ್ಚಿತ.
ಕಂಪನ ಪ್ರಮಾಣ ಹೆಚ್ಚಿದ ಮಾತ್ರಕ್ಕೆ ದೊಡ್ಡದೊಂದು ಗಂಡಾಂತರ ಸಂಭವಿಸಲಿದೆ ಎಂದೇನಲ್ಲ ಎಂದು ಕೆಲವು ತಜ್ಞರು ವಾದಿಸಿದರೆ, ‘ಈ ಬೆಳವಣಿಗೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಕಂಪನದ ಕೇಂದ್ರ ವಲಯಗಳಲ್ಲಿ ದೆಹಲಿಯೂ ಇರುವುದರಿಂದ ಯಾವಾಗ ಏನೂ ಬೇಕಾದರೂ ಸಂಭವಿಸಬಹುದು’ ಎಂದು ಮತ್ತೆ ಕೆಲವರು ಪ್ರತಿಪಾದಿಸುತ್ತಾರೆ. ಅದೇನೇ ಇದ್ದರೂ, ಭೂಮಿಯ ವರ್ತನೆಯಲ್ಲಿ ಈ ಪರಿಯ ಬದಲಾವಣೆಗೆ ಕಾರಣ ಏನು ಎಂಬುದು ಸಹಜ ಕುತೂಹಲ ಕೆರಳಿಸಿದೆ.
ಸುಮಾರು 2 ಕೋಟಿ ಜನಸಂಖ್ಯೆ ಇರುವ ದೆಹಲಿಯಲ್ಲಿ ಲಕ್ಷಾಂತರ ಕಟ್ಟಡಗಳಿವೆ. ಸಾವಿರಾರು ಅಪಾರ್ಟ್ವೆುಂಟ್ಗಳು ತಲೆ ಎತ್ತಿವೆ. ಹೀಗಾಗಿ ದೊಡ್ಡ ಪ್ರಮಾಣದ ಭೂಕಂಪ ಎಂದಿಗೂ ಅಪಾಯಕಾರಿ. ‘ಭೂಕಂಪ ನಿರೋಧಕ ಕಟ್ಟಡಗಳ ಕೊರತೆಯಿಂದಲೇ ಶೇಕಡ 95ರಷ್ಟು ಮಂದಿ ಸಾವಿಗೀಡಾಗುತ್ತಾರೆ ಎಂದು ಭೂಕಂಪ ನಿರ್ವಹಣೆ ಕುರಿತ 2007ರ ಪ್ರಾಕೃತಿಕ ವಿಕೋಪದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಕಟ್ಟಡಗಳಿಗೆ ಇರಬೇಕಾದ ಕೋಡ್ಗಳು ಮತ್ತು ಇತರ ನಿಬಂಧನೆಗಳ ಜತೆಗೆ ತಿಳಿಸಲಾದ ತಂತ್ರಜ್ಞಾನಗಳಿಗೆ ಅನುಗುಣವಾಗಿ ಕಟ್ಟಡ ನಿರ್ವಿುಸಬೇಕೆಂಬ ನಿಯಮಗಳಿದ್ದರೂ ಅದನ್ನು ಪಾಲಿಸಲಾಗುತ್ತಿಲ್ಲ. 2001ರ ಗುಜರಾತ್ನ ಬುಜ್ ಭೂಕಂಪನದಿಂದಾಗಿ ಅಹಮದಾಬಾದ್ನ 120 ಅಂತಸ್ತಿನ ಬಹುಮಹಡಿ ಕಟ್ಟಡ ನೆಲಸಮಗೊಂಡಿದ್ದು ಇದಕ್ಕೆ ಒಳ್ಳೆಯ ಉದಾಹರಣೆ. ತುಲನಾತ್ಮಕವಾಗಿ ಇದು ಕಡಿಮೆ ತೀವ್ರತೆಯ ಭೂಕಂಪವಾಗಿತ್ತಾದರೂ 712 ಮಂದಿ ಸತ್ತಿದ್ದರು’ ಎಂದು ಭೂಗರ್ಭ ಶಾಸ್ತ್ರಜ್ಞ ಡಾ. ಪ್ರಭಾತ್ ಪಾಂಡೆ ತಮ್ಮ ಲೇಖನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ದೊಡ್ಡ ಭೂಕಂಪಕ್ಕೆ ದೆಹಲಿಯ ಶೇ.90ರಷ್ಟು ಕಟ್ಟಡಗಳು ಕುಸಿದು ಬೀಳಬಹುದು ಎಂದು 2019ರಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ ದೆಹಲಿ ಮಹಾನಗರ ಪಾಲಿಕೆ ವಕೀಲರು ಹೈಕೋರ್ಟ್ಗೆ ತಿಳಿಸಿದ್ದರು. ಈ ಬೆಳವಣಿಗೆ ಬಳಿಕವೇ ಈ ಎಲ್ಲ ಕಟ್ಟಡಗಳ ಸುರಕ್ಷತೆ ಕುರಿತ ಆಡಿಟ್ ನಡೆಸಬೇಕು ಎಂದು ಹೈಕೋರ್ಟ್ ಪಾಲಿಕೆಗೆ ಸೂಚನೆ ನೀಡಿತ್ತು. ದೆಹಲಿಯ ಬಹುಪಾಲು ಜನಸಂಖ್ಯೆ ಕೊಳೆಗೇರಿಯಲ್ಲೇ ನೆಲೆಸಿದೆ ಮತ್ತು ಈ ಮನೆಗಳು ಯಾವಾಗ ಬೇಕಾದರೂ ಕುಸಿದು ಬೀಳಬಹುದಾದ ಸ್ಥಿತಿಯಲ್ಲಿವೆ. ಕೊಳೆಗೇರಿಗಳಲ್ಲಿನ ಈ ಕಟ್ಟಡಗಳಿಗೆ ನಕಾಶೆಯಾಗಲೀ, ಸುರಕ್ಷತಾ ಕ್ರಮಗಳಾಗಲೀ ಯಾವುದೂ ಇಲ್ಲ. ಬ್ಯೂರೋ ಆಫ್ ಇಂಡಿಯನ್ ಸ್ಟಾ್ಯಂಡರ್ಡ್ಸ್ ಕೂಡ ದೆಹಲಿ ಕಟ್ಟಡಗಳ ಅಪಾಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಇಲ್ಲಿನ ರೆಸಿಡೆನ್ಷಿಯಲ್ ಕಾಲನಿಗಳಲ್ಲೂ ಮನೆಗಳ ನಡುವೆ ಇರುವ ಅಂತರ ತುಂಬ ಕಡಿಮೆಯಿದ್ದು, ತತ್ಕ್ಷಣಕ್ಕೆ ಈ ಸ್ಥಳಗಳಿಂದ ಬೇರೊಂದು ಜಾಗಕ್ಕೆ ಓಡುವುದೂ ಅಸಾಧ್ಯ.
ಭೂಕಂಪವನ್ನು ಮುಂಚಿತವಾಗಿ ಊಹಿಸಲಾಗದು. ಆದರೆ, ಭೂಕಂಪನಕ್ಕೆ ಮುನ್ನ ಭೂಮಿಯಲ್ಲಿ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳನ್ನು ಗುರುತಿಸಲು ಸಾಧ್ಯವಿದೆ. ಭೂಕಂಪನಕ್ಕೆ ಸಸ್ಯವರ್ಗವು ಒಣಗಿ ಹೋಗುತ್ತದೆ ಅಥವಾ ಅತಿಯಾಗಿ ಹಸಿರು ಬಣ್ಣಕ್ಕೆ ತಿರುಗುತ್ತವೆ. ಉಪಗ್ರಹಗಳ ಮೂಲಕ ಇದನ್ನು ತಕ್ಕಮಟ್ಟಿಗೆ ಕಂಡುಹಿಡಿಯಬಹುದು ಎಂದು ತಜ್ಞರು ಹೇಳುತ್ತಾರೆ. ‘ದೇಶದ ಭೂಕಂಪನ ವಲಯಗಳಲ್ಲಿ ದೆಹಲಿ ವಲಯ 4ರಲ್ಲಿದೆ. ಅಂದರೆ, ಇಲ್ಲಿ ಭೂಕಂಪದ ಸಂಭವನೀಯತೆ ಹೆಚ್ಚು. ಹಿಮಾಲಯ, ಅಂಡಮಾನ್-ನಿಕೋಬಾರ್ ದ್ವೀಪಗಳು ಮತ್ತು ಈಶಾನ್ಯ ಭಾರತದ ಪ್ರದೇಶಗಳಲ್ಲಿ ಅತಿ ಹೆಚ್ಚು ಭೂಕಂಪನ ಸಂಭವಿಸುತ್ತಿರುತ್ತದೆ. ದೆಹಲಿಯಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಸಣ್ಣ ಅಲುಗಾಡುವಿಕೆಯೂ ಭೀತಿಯನ್ನು ದುಪ್ಪಟ್ಟುಗೊಳಿಸುತ್ತದೆ. 2 ತಿಂಗಳಲ್ಲಿ ಹತ್ತಕ್ಕಿಂತ ಹೆಚ್ಚು ಬಾರಿ ನೆಲ ಕಂಪಿಸಿದೆ ಎಂದಮಾತ್ರಕ್ಕೆ ದೊಡ್ಡ ಭೂಕಂಪ ಸಂಭವಿಸಲಿದೆ ಎಂದು ನಾನು ಹೇಳಲಾರೆ. ಸರ್ಕಾರ ಅಪಾಯಕಾರಿ ಎನಿಸದ ಸುರಕ್ಷಿತ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಮಾತ್ರ ಕಟ್ಟಡಗಳನ್ನು ನಿರ್ವಿುಸಲು ಅನುಮತಿ ನೀಡಬೇಕು. ಏಕೆಂದರೆ, ದೊಡ್ಡ ಪ್ರಮಾಣದ ಭೂಕಂಪ ಸಂಭವಿಸಿದಲ್ಲಿ ದೆಹಲಿಯ ಸ್ಥಿತಿ ಊಹಿಸಲಸಾಧ್ಯ’ ಎಂದು ಭಾರತೀಯ ಹವಾಮಾನ ಇಲಾಖೆಯ ಮಾಜಿ ನಿರ್ದೇಶಕ ಡಾ. ಕೆ.ಜೆ. ರಮೇಶ್ ಹೇಳುತ್ತಾರೆ.
ಅಪಾಯಕಾರಿ ವಲಯ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದ ಪ್ರಾಮುಖ್ಯ, ಭೂಕಂಪನ ಸ್ಥಿತಿ-ಗತಿ ಗಮನದಲ್ಲಿ ಇಟ್ಟುಕೊಂಡು, ಭೂಮಿಯ ಪ್ರಕ್ಷುಬ್ಧತೆಗಳನ್ನು ನಿರಂತರವಾಗಿ ಗಮನಿಸಲೆಂದೇ ಇಲ್ಲಿ ಭಾರತೀಯ ಹವಾಮಾನ ಇಲಾಖೆ 1998-2000ರಲ್ಲಿ ಭೂಕಂಪನ ಟೆಲಿಮೆಟ್ರಿ ಜಾಲದ 16 ಫೀಲ್ಡ್ ಅಬ್ಸರ್ವೆಟರಿಗಳನ್ನು (ಕ್ಷೇತ್ರ ವೀಕ್ಷಣಾಲಯ) ಸ್ಥಾಪಿಸಿದೆ. ಈ ಜಾಲದಲ್ಲಿ ಗುರುತಿಸಿರುವಂತೆ, 2005ರಿಂದ 2012ರ ಮಧ್ಯೆ, ಭೂಕಂಪನದ 422 ಘಟನೆಗಳು ದೆಹಲಿ ಸುತ್ತಮುತ್ತ ಸಂಭವಿಸಿದೆ. ಬಹುಪಾಲು ಘಟನೆಗಳಲ್ಲಿ ರಿಕ್ಟರ್ ಮಾಪನ ಪ್ರಮಾಣವು 3.0ಕ್ಕಿಂತ ಕಡಿಮೆ ಇತ್ತು. ಈಚಿನ ದಿನಗಳಲ್ಲಿ ಕಂಪನ ಹೆಚ್ಚುತ್ತಿರುವುದು ಅಪಾಯದ ಮುನ್ಸೂಚನೆಯೇ ಎಂಬ ಪ್ರಶ್ನೆಗೆ, ‘ಭೂಕಂಪನದ ಸ್ಥಳ, ಸಮಯದ ಬಗ್ಗೆ ಭವಿಷ್ಯ ಹೇಳಲಾಗುವುದಿಲ್ಲ. ಆದರೆ, ಪದೇಪದೆ ಕಂಪಿಸುವುದು ಅನಾಹುತದ ಮುನ್ಸೂಚನೆ’ ಎಂದು ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ವಿಭಾಗದ ಮುಖ್ಯಸ್ಥ ಕಾಲಾಚಂದ್ ಸೈನ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಮತ್ತೆ ಲಘು ಭೂಕಂಪ: ದೆಹಲಿಯಲ್ಲಿ ಸೋಮವಾರ ಭೂಮಿ ಲಘುವಾಗಿ ಕಂಪಿಸಿದ ಅನುಭವವಾಯಿತು. ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆಯ ಕಂಪನ ದಾಖಲಾಗಿದೆ. ದೆಹಲಿ-ಗುರುಗ್ರಾಮ ಗಡಿಯಲ್ಲಿ ಭೂಕಂಪದ ಕೇಂದ್ರ ಇತ್ತು. ಭೂಮಿಯಿಂದ 18 ಕಿಮೀ ಆಳದಲ್ಲಿ ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಕಂಪನ ಸಂಭವಿಸಿತು.
ಹಿಂದಿನ ಕಂಪನಗಳು: 2016ರ ಭೂವಿಜ್ಞಾನ ಇಲಾಖೆ ವರದಿ ಪ್ರಕಾರ, 1991ರ ಉತ್ತರಕಾಶಿ ಭೂಕಂಪ (6.4 ತೀವ್ರತೆ) ಮತ್ತು 1999ರ (6.8ರ ತೀವ್ರತೆ) ಹಿಮಾಚಲ ಪ್ರದೇಶದ ಚಮೋಲಿ ಪ್ರದೇಶದಲ್ಲಿನ ಭೂಕಂಪ ದೆಹಲಿ ಮೇಲೆ ವ್ಯಾಪಕ ಪರಿಣಾಮ ಬೀರಿತ್ತು. 1803ರ ಮಥುರಾ ಭೂಕಂಪನ (6.8 ತೀವ್ರತೆ), ಉತ್ತರ ಪ್ರದೇಶದ ಬುಲಂದ್ ಶಹರ್ ಭೂಕಂಪನ (6.7 ತೀವ್ರತೆ) ಮತ್ತು ಫರಿದಾಬಾದ್ ಭೂಕಂಪನ (6 ತೀವ್ರತೆ) ದೆಹಲಿ ಮತ್ತು ನೆರೆಯ ಜಿಲ್ಲೆಗಳ ಮೇಲೆ ಪರಿಣಾಮ ಬೀರಿತ್ತು. 1803ರ ಮಥುರಾ ಭೂಕಂಪ ಸುಪ್ರಸಿದ್ಧ ಕುತುಬ್ ಮಿನಾರ್ಗೆ ಹಾನಿಯನ್ನು ಉಂಟುಮಾಡಿತ್ತು. 1960ರ ಹಿಂದೆ ಗುರಗಾಂವ್ನಲ್ಲಿ ಸಂಭವಿಸಿದ ಭೂಕಂಪ (6ರಷ್ಟು ತೀವ್ರತೆ) ಕಾನ್ಪುರ ಮತ್ತು ಜೈಪುರದವರೆಗೂ ಸದ್ದು ಮಾಡಿ, ದೆಹಲಿಯಲ್ಲಿ ವ್ಯಾಪಕ ಆಸ್ತಿಪಾಸ್ತಿ ಮತ್ತು ಹಾನಿಯನ್ನುಂಟುಮಾಡಿತು. 1956ರ ಅಕ್ಟೋಬರ್ 10ರ ಭೂಕಂಪವು (ಮೊರಾದಾಬಾದ್ ಬಳಿ) ದೆಹಲಿ ಸುತ್ತಮುತ್ತ ಸಂಭವಿಸಿದ ಅತಿದೊಡ್ಡ ಭೂಕಂಪ ಎಂದು ದಾಖಲಾಗಿದೆ. ಇದರಿಂದ ಹಲವು ಕಟ್ಟಡಗಳಿಗೆ ಹಾನಿಯಾಗಿದ್ದಲ್ಲದೆ, ಬುಲಂದ್ ಶಹರ್ನಲ್ಲಿ 23 ಜನರು ಮೃತಪಟ್ಟಿದ್ದರು. ದೆಹಲಿಯಲ್ಲಿ ಹಲವರು ಗಾಯಗೊಂಡಿದ್ದರು ಎಂದೂ ಈ ವರದಿ ಹೇಳುತ್ತದೆ.