ಬೆಂಗಳೂರು: ಯಲಹಂಕ ಮೇಲ್ಸೇತುವೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಚಾಲಕರು ಮೃತಪಟ್ಟಿದ್ದಾರೆ.
ಪಂಜಾಬ್ ಮೂಲದ ಕುಲದೀಪ್ ಕುಮಾರ್ (೪೨) ಮತ್ತು ಬಾಗಲಕೋಟೆ ಜಿಲ್ಲೆ ಬಾದಾಮಿಯ ಜಗದೀಶ್ (೪೦) ಮೃತಪಟ್ಟವರು. ಕುಲದೀಪ್ ಕುಮಾರ್ ಕಾಂಕ್ರಿಟ್ ಮಿಕ್ಸರ್ ಲಾರಿ ಚಾಲಕರಾಗಿದ್ದರು. ಜಗದೀಶ್ ಇನ್ನೋವಾ ಕಾರಿನ ಚಾಲಕರಾಗಿದ್ದರು.
ಸರಣಿ ಅಪಘಾತದಲ್ಲಿ ಬಿಎಂಟಿಸಿ ಬಸ್ ಚಾಲಕ ಪುಟ್ಟಸ್ವಾಮಿಗೂ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಗದೀಶ್ ಅವರ ಮಾಲೀಕರು ವಿದೇಶದಿಂದ ಸೋಮವಾರ ತಡರಾತ್ರಿ ವಿಮಾನದ ಮೂಲಕ ಬೆಂಗಳೂರಿಗೆ ಬರುತ್ತಿದ್ದರು. ಹೀಗಾಗಿ ಅವರನ್ನು ಮನೆಗೆ ಕರೆ ತರಲು ಕಾರಿನಲ್ಲಿ ವಿಮಾನ ನಿಲ್ದಾಣ ಕಡೆ ಹೋಗುತ್ತಿದ್ದರು. ಅದೇ ಮಾರ್ಗದಲ್ಲಿ ಸಿಮೆಂಟ್ ಮಿಕ್ಸರ್ ಲಾರಿ ಕೂಡ ದೇವನಹಳ್ಳಿ ಕಡೆ ತೆರಳುತ್ತಿತ್ತು. ತಡರಾತ್ರಿ ೧೧.೩೦ಕ್ಕೆ ವೇಗವಾಗಿ ಬಂದ ಲಾರಿ, ಇನೋವಾ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಕಾರಿಗೆ ಹಾನಿಯಾಗಿದೆ.
ಅದರಿಂದ ಕಾರು ಮತ್ತು ಲಾರಿ ಚಾಲಕರು ರಸ್ತೆ ಬದಿ ನಿಂತು ಪರಸ್ಪರ ವಾಗ್ವಾದ ನಡೆಸಿ ಜಗಳವಾಡುತ್ತಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಬಿಎಂಟಿಸಿ ಬಸ್ ಚಾಲಕ ಅತಿವೇಗವಾಗಿ ಬಂದು ನಿಯಂತ್ರಣ ತಪ್ಪಿ ಲಾರಿಯ ಹಿಂಭಾಗಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಲಾರಿ ೧೦ ಅಡಿ ಮುಂದೆ ಹೋಗಿದ್ದು, ಆಗ ಇಬ್ಬರು ಚಾಲಕರು ಲಾರಿ ಮತ್ತು ಇನೋವಾ ಕಾರಿನ ಮಧ್ಯೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾರಿ ಚಾಲಕ ಸ್ಥಳದಲ್ಲೇ ಸಾವು
ಇಬ್ಬರು ಚಾಲಕರೂ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವಾಗಿದ್ದು, ಲಾರಿ ಚಾಲಕ ಕುಲದೀಪ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕ ಜಗದೀಶ್‌ರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ. ಇನ್ನು ಬಿಎಂಟಿಸಿ ಬಸ್ ಚಾಲಕ ಪುಟ್ಟಸ್ವಾಮಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಚಾಲಕರ ನಿರ್ಲಕ್ಷ್ಯ:
ಲಾರಿ ಮತ್ತು ಕಾರಿನ ಚಾಲಕರು ನಿರ್ಲಕ್ಷ್ಯದಿಂದ ರಸ್ತೆ ಬದಿ ನಿಲ್ಲಿಸಿಕೊಂಡು ಮಾತಿನ ವಾಗ್ವಾದದಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿ ಕತ್ತಲು ವಾತಾವರಣ ಇತ್ತು ಹೀಗಾಗಿ ಸರಣಿ ಅಪಘಾತ ಸಂಭವಿಸಿದೆ.
ಲಾರಿ, ಕಾರು ಹಾಗೂ ಬಸ್ ನಜ್ಜುಗುಜ್ಜಾಗಿವೆ. ಅಪಘಾತದ ಸಂದರ್ಭದಲ್ಲಿ ಬಸ್‌ನಲ್ಲಿದ್ದ ನಿರ್ವಾಹಕ ಹಾಗೂ ಪ್ರಯಾಣಿಕರಿಗೆ ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ. ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.