ನ್ಯೂಸ್

ಹೊರಮಾವು ಹೊರ ವರ್ತುಲ ರಸ್ತೆಯಲ್ಲಿ ಸರಣಿ ಅಪಘಾತ; ತಾಯಿ-ಮಗ ಸಾವು

ಬೆಂಗಳೂರು: ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸುತ್ತಿದ್ದ ಬಿಎಂಟಿಸಿ ಬಸ್‌ಗೆ ಹಿಂದಿನಿಂದ ಆಟೋ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿ ತಾಯಿ-ಮಗ ಮೃತಪಟ್ಟಿದ್ದಾರೆ. ದಂಪತಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ.

ಆಂಧ್ರಪ್ರದೇಶದ ಅಶ್ವಿನಿ (29) ಮತ್ತು ಆಕೆಯ ಪುತ್ರ ನಿಡುಮಾಮಿಡಿ ಯಶ್ವಿನ್ (7) ಮೃತರು. ಈ ಘಟನೆಯಲ್ಲಿ ಅರ್ಜುನ್ ಬಿಸ್ಟಾ, ಅವರ ಪತ್ನಿ ಕಮಾ ಬಿಸ್ಟಾ, ಬೊಲೆರೋ ಫಿಕ್ ಆಪ್ ಚಾಲಕ ದಿಲ್ ಬಹುದ್ದೂರ್ ಶ್ರೇಷ್ಠ ಮತ್ತು ಆಟೋ ಚಾಲಕ ಸಂಜು ಗಾಯಗೊಂಡಿದ್ದಾರೆ. ಗಾಯಾಳುಗಳು ಪ್ರಾಣಪಾಯದಿಂದ ಪರಾಗಿದ್ದಾರೆ. ಆಟೋ, ಬೊಲೆರೋ ಪಿಕ್ ಆಪ್ ಮತ್ತು ಬೈಕ್‌ಗಳು ಜಖಂಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.\

ಹೊರಮಾವು ಹೊರ ವರ್ತುಲ ರಸ್ತೆಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ಮಂಗಳವಾರ ಬೆಳಗ್ಗೆ 10.30ರಲ್ಲಿ ಬಸ್ ನಿಲ್ಲಿಸಲಾಗಿತ್ತು. ಅದೇ ವೇಳೆ ರಾಮಮೂರ್ತಿನಗರ ಕಡೆಯಿಂದ ಬಂದ ಆಟೋ ಚಾಲಕ, ನಿಂತಿದ್ದ ಬಸ್‌ನ್ನು ಗಮನಿಸದೆ ಹಿಂದಿನಿಂದ ಗುದ್ದಿಸಿದ್ದಾನೆ. ಆಟೋ ಹಿಂದೆ ಬರುತ್ತಿದ್ದ ಬೊಲೆರೋ ಪಿಕ್ ಆಪ್ ವಾಹನವು, ಆಟೋವನ್ನು ತಪ್ಪಿಸಲು ಹೋಗಿ ಬಲಗಡೆಗೆ ತಿರುಗಿಸಿದಾಗ ಮುಂದೆ ಹೋಗುತ್ತಿದ್ದ ಬೈಕ್‌ಗೆ ಗುದ್ದಿದ್ದಾನೆ.

ನಿಯಂತ್ರಣ ತಪ್ಪಿ ಬೈಕ್‌ನಲ್ಲಿದ್ದ ತಾಯಿ-ಮಗ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅದೇ ರೀತಿ ಆಟೋದಲ್ಲಿ ಬಿಸ್ಟಾ ದಂಪತಿಗೆ ಸಹ ಗಾಯವಾಗಿದೆ. ಚಾಲಕರಿಗೂ ಗಾಯವಾಗಿದೆ. ಕೂಡಲೇ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಅಶ್ವಿನಿ ಮತ್ತು ಯಶ್ವಿನ್ ಅಸುನೀಗಿದ್ದಾರೆ. ಗಾಯಾಳು ಬಿಸ್ಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾರೆ. ಇನ್ನು ಸಣ್ಣಪುಟ್ಟ ಗಾಯವಾಗಿದ್ದ ಆಟೋ ಚಾಲಕ ಸಂಜು ಮತ್ತು ಬೊಲೆರೋ ಪಿಕ್ ಆಪ್ ವಾಹನದ ಚಾಲಕ ದಿಲ್ ಬಹುದ್ದೂರ್ ಶ್ರೇಷ್ಠನನ್ನು ಚಿಕಿತ್ಸೆ ಬಳಿಕ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಣಸವಾಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಲಕರ ಮನೆಗೆ ಬಂದಿದ್ದ ಕುಟುಂಬ:

ಹೂಡಿಯಲ್ಲಿ ನೆಲೆಸಿದ್ದ ನರೇಶ್, ಕೆಲ ತಿಂಗಳ ಹಿಂದೆ ಆಂಧ್ರಪ್ರದೇಶಕ್ಕೆ ಕುಟುಂಬ ಸಮೇತ ಸ್ಥಳಾಂತರ ಆಗಿದ್ದರು. ವಿಜಯದಶಮಿ ಅಂಗವಾಗಿ ಕೆ.ಜಿ.ಹಳ್ಳಿಯಲ್ಲಿದ್ದ ತಮ್ಮ ಪಾಲಕರ ಮನೆಗೆ ಮಂಗಳವಾರ ಪತ್ನಿ ಅಶ್ವಿನಿ ಮತ್ತು ಮಗ ಯಶ್ವಿನ್ ಜತೆ ಅವರು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಅಧಿಕಾರಿಗಳು ತಿಳಿಸಿದ್ದಾರೆ.