ನ್ಯೂಸ್

ಸೆ.30ಕ್ಕೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭವಿಷ್ಯ ನಿರ್ಧರಿಸೋ ಚುನಾವಣೆ!

ನವದೆಹಲಿ: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಸಿಎಂ ಆಗಿ ಮುಂದುವರಿಯಲು ಸ್ಪರ್ಧಿಸಲಿರುವ ಮತ್ತು ಗೆಲ್ಲಲೇಬೇಕಾದ ಭಬಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಸೆಪ್ಟೆಂಬರ್ 30 ರಂದು ನಡೆಯಲಿದೆ. ಒಂದೇ ಹಂತದ ಮತದಾನದ ನಂತರ ಅಕ್ಟೋಬರ್​ 3 ರಂದು ಮತಎಣಿಕೆ ನಡೆಯಲಿದ್ದು, ಮಮತಾರ ಭವಿಷ್ಯ ಅಂದು ನಿರ್ಧಾರವಾಗಲಿದೆ.

ಭಾರತದ ಚುನಾವಣಾ ಆಯೋಗವು ಇಂದು(ಸೆ.4) ಮಧ್ಯಾಹ್ನ ಈ ಮಾಹಿತಿ ನೀಡಿದೆ. ಒಡಿಶಾದ ಪೀಪ್ಲಿ, ಪಶ್ಚಿಮ ಬಂಗಾಳದ ಇನ್ನೆರಡು ಕ್ಷೇತ್ರಗಳಾದ ಸಮ್ಸೇರ್​ಗಂಜ್​ ಮತ್ತು ಜಂಗೀಪುರ್​ನೊಂದಿಗೆ ಭಬಾನಿಪುರ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಸಂವೈಧಾನಿಕ ತುರ್ತು ಸ್ಥಿತಿಯನ್ನೂ, ಬಂಗಾಳ ಸರ್ಕಾರದ ವಿಶೇಷ ಮನವಿಯನ್ನೂ ಪರಿಗಣಿಸಿ ವಿಧಾನಸಭಾ ಕ್ಷೇತ್ರ 159 - ಭಬಾನಿಪುರಕ್ಕೆ ಉಪಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಆಯೋಗ ಹೇಳಿಕೆ ನೀಡಿದೆ.

ಆದರೆ, ಉಪಚುನಾವಣೆಯ ಅಗತ್ಯವಿರುವ ವಿವಿಧ ರಾಜ್ಯಗಳ ಉಳಿದ 31 ವಿಧಾನಸಭಾ ಕ್ರೇತ್ರಗಳಿಗೆ ಮತ್ತು 3 ಲೋಕಸಭಾ ಕ್ಷೇತ್ರಗಳಿಗೆ ಸದ್ಯಕ್ಕೆ ಉಪಚುನಾವಣೆ ನಡೆಸುವುದಿಲ್ಲ. ಈ ನಿಟ್ಟಿನಲ್ಲಿ ಕರೊನಾ ಪರಿಸ್ಥಿತಿಯ ಬಗ್ಗೆ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯೋಗ ಹೇಳಿದೆ.

ಏಪ್ರಿಲ್​-ಮೇನಲ್ಲಿ ನಡೆದಿದ್ದ ಮಹಾಚುನಾವಣೆಯಲ್ಲಿ ಮಮತಾ ತಮ್ಮ ಗಟ್ಟಿ ಕ್ಷೇತ್ರವಾದ ಭಬಾನಿಪುರವನ್ನು ತೊರೆದು ನಂದೀಗ್ರಾಮದಿಂದ ಚುನಾವಣೆ ಸ್ಪರ್ಧಿಸಿದ್ದರು. ಒಂದು ಸಮಯದ ತಮ್ಮ ಆಪ್ತರಾಗಿದ್ದು, ಚುನಾವಣೆಯ ಕೆಲವು ತಿಂಗಳ ಮುಂಚೆಯಷ್ಟೇ ಬಿಜೆಪಿಗೆ ಜಿಗಿದಿದ್ದ ಸುವೇಂದು ಅಧಿಕಾರಿ ಅವರ ವಿರುದ್ಧ ಸೆಣೆಸಾಡಿ ಸೋಲನುಭವಿಸಿದ್ದರು. ಆದರೆ ತಮ್ಮ ಪಕ್ಷ ಭಾರೀ ಬಹುಮತ ಸಾಧಿಸಿದ ಹಿನ್ನೆಲೆಯಲ್ಲಿ ಸಿಎಂ ಹುದ್ದೆ ಅಲಂಕರಿಸಿದ್ದರು.

ಸಂವಿಧಾನದ ಪ್ರಕಾರ ಸಿಎಂ ಸ್ಥಾನದಲ್ಲಿ ಮುಂದುವರಿಯಲು 6 ತಿಂಗಳೊಳಗೆ ಅವರು ರಾಜ್ಯದ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಲೇ ಬೇಕಿದೆ. ಮಮತಾರಿಗೆ ಗೆಲ್ಲಲು ಸುಲಭವಾಗುವಂತೆ, ಭಬಾನಿಪುರದಿಂದ ಗೆದ್ದಿದ್ದ ಟಿಎಂಸಿಯ ಹಿರಿಯ ನಾಯಕ ಸೋವನ್​ದೇವ್​ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿ ಸ್ಥಾನ ತೆರವುಗೊಳಿಸಿದ್ದರು. (ಏಜೆನ್ಸೀಸ್)