ನ್ಯೂಸ್

ಸೆನ್ಸೆಕ್ಸ್​ 600 ಅಂಶ ಕುಸಿತ, ನಿಫ್ಟಿ 9,000 ಅಂಶಕ್ಕಿಂತ ಕೆಳಕ್ಕೆ...

ಮುಂಬೈ: ಕರೊನಾ ಎಫೆಕ್ಟ್​ ಷೇರುಪೇಟೆ ಮೇಲೆ ಮುಂದುವರಿದಿದ್ದು, ಸೋಮವಾರ ವಹಿವಾಟು ಆರಂಭವಾಗುತ್ತಲೇ ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 600 ಅಂಶ, ನ್ಯಾಷನಲ್​ ಸ್ಟಾಕ್​ ಎಕ್ಸ್​ಚೇಂಜ್​ (ಎನ್​ಎಸ್​ಇ) ನಿಫ್ಟಿ 9,000 ಅಂಶಕ್ಕಿಂತ ಕೆಳಕ್ಕೆ ಕುಸಿದಿದೆ. ರಿಲಯನ್ಸ್​ ಇಂಡಸ್ಟ್ರಿ, ಎಚ್​ಡಿಎಫ್​ಸಿ, ಐಸಿಐಸಿಐ ಬ್ಯಾಂಕ್​ ಷೇರುಗಳು ನಷ್ಟ ಅನುಭವಿಸಿರುವುದು ಇದಕ್ಕೆ ಕಾರಣ.

ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ 30,541.97ಕ್ಕೆ ಕುಸಿದ ಸೆನ್ಸೆಕ್ಸ್​ ಬಳಿಕ ಅಲ್ಪ ಚೇತರಿಸಿಕೊಂಡು ಮತ್ತೆ 581.75 ಅಂಶ ಅಥವಾ ಶೇಕಡ 1.87 ಕುಸಿತ ಕಂಡು 30,577.877ರಲ್ಲಿ ವಹಿವಾಟು ಮುಂದುವರಿಸಿದೆ. ನಿಫ್ಟಿ 169.85 ಅಂಶ ಕುಸಿದು 8,942.05ರಲ್ಲಿ ವಹಿವಾಟು ನಡೆಸಿದೆ.

ಸೆನ್ಸೆಕ್ಸ್ ಪಟ್ಟಿಯಲ್ಲಿ ಬಜಾಜ್ ಫೈನಾನ್ಸ್ ಷೇರುಗಳು ಶೇಕಡ 8 ನಷ್ಟ ಅನುಭವಿಸಿದರೆ, ಮಹಿಂದ್ರಾ ಆ್ಯಂಡ್ ಮಹಿಂದ್ರಾ, ಮಾರುತಿ, ಒಎನ್​ಜಿಸಿ, ಟೈಟಾನ್​, ಬಜಾಜ್ ಆಟೋ ಷೇರುಗಳು ನಷ್ಟ ಅನುಭವಿಸಿವೆ. ಇನ್ನೊಂದೆಡೆ, ಭಾರ್ತಿ ಏರ್​​ಟೆಲ್​, ಎಲ್​ಆ್ಯಂಡ್​ಟಿ, ಇನ್​ಫೋಸಿಸ್​, ಎನ್​ಟಿಪಿಸಿ ಷೇರುಗಳು ಲಾಭಗಳಿಸಿವೆ.

ಹಿಂದಿನ ವಹಿವಾಟಿನ ದಿನದಲ್ಲಿ ಸೆನ್ಸೆಕ್ಸ್​ 1,265.66 ಅಂಶ ಏರಿಕೆಯಾಗಿದ್ದು 31,159.62ರಲ್ಲಿ ವಹಿವಾಟು ಮುಗಿದಿತ್ತು. ಇದೇ ರೀತಿ ನಿಫ್ಟಿ 363.15 ಅಂಶ ಏರಿಕೆ ಕಂಡು 9,111.90 ಅಂಶದಲ್ಲಿ ವಹಿವಾಟು ಕೊನೆಗೊಂಡಿತ್ತು. (ಏಜೆನ್ಸೀಸ್)