ನ್ಯೂಸ್

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ 300 ಅಂಶಕ್ಕೂ ಹೆಚ್ಚು ಕುಸಿತ, ಐಟಿ ಷೇರುಗಳಿಗೇ ಹೆಚ್ಚು ಹಾನಿ

ಮುಂಬೈ: ಕರೊನಾ COVID19 ವೈರಸ್ ಸೋಂಕಿನ ಕಾರಣಕ್ಕೆ ಜಗತ್ತಿನ ಅರ್ಥವ್ಯವಸ್ಥೆ ತಲ್ಲಣಗೊಂಡಿದ್ದು, ಷೇರುಪೇಟೆ ಮೇಲೂ ವ್ಯತಿರಿಕ್ತ ಪರಿಣಾಮವಾಗಿದೆ. ಗುರುವಾರದ ಟ್ರೇಡಿಂಗ್ ಆರಂಭವಾಗುತ್ತಿದ್ದಂತೆ ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 300ಕ್ಕೂ ಹೆಚ್ಚು ಅಂಶಗಳ ಕುಸಿತ ಕಂಡಿದೆ.

ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ 30,016.17 ಅಂಶಕ್ಕೆ ಇಳಿದ ನಂತರದಲ್ಲಿ ಮತ್ತೆ ಕೊಂಚ ಏರಿಕೆ ದಾಖಲಿಸಿ 336.77 ಅಂಶ ಕುಸಿದು 30,043.04ರಲ್ಲಿ ವಹಿವಾಟು ಮುಂದುವರಿಸಿತ್ತು. ಇದೇ ರೀತಿ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 81.10 ಅಂಶ ಕುಸಿದು 8,844.20 ಅಂಶದಲ್ಲಿ ವಹಿವಾಟು ಮುಂದುವರಿಸಿತ್ತು.

ಸೆನ್ಸೆಕ್ಸ್ ಪಟ್ಟಿಯಲ್ಲಿ ಇನ್​​ಫೋಸಿಸ್ ಕಂಪನಿಯ ಷೇರುಗಳು ಗರಿಷ್ಠ ಶೇಕಡ 4 ನಷ್ಟ ಅನುಭವಿಸಿದರೆ, ಕೊಟಾಕ್ ಬ್ಯಾಂಕ್​, ಹೀರೋ ಮೋಟೋಕಾರ್ಪ್​, ಟೆಕ್ ಮಹೀಂದ್ರಾ, ಟೈಟಾನ್ ಮತ್ತು ಏಕ್ಸಿಸ್ ಬ್ಯಾಂಕ್​ ಷೇರುಗಳು ನಷ್ಟ ಅನುಭವಿಸಿವೆ. ಇನ್ನೊಂದೆಡೆ, ಎಲ್​ಆ್ಯಂಡ್​ಟಿ, ಪವರ್​ಗ್ರಿಡ್​, ಸನ್​ಫಾರ್ಮಾ, ರಿಲಯನ್ಸ್​ ಇಂಡಸ್ಟ್ರೀಸ್​, ಒಎನ್​ಜಿಸಿ ಷೇರುಗಳು ಲಾಭ ಗಳಿಸುವ ದಿಕ್ಕಿನಲ್ಲಿ ಸಾಗಿವೆ.

ಹಿಂದಿನ ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್​ 310.21 ಅಂಶ (1.01%) ಇಳಿದು 30,379.81ರಲ್ಲಿ ವಹಿವಾಟು ಮುಗಿಸಿತ್ತು. ಇದೇ ರೀತಿ ನಿಫ್ಟಿ 50 ಕೂಡ 68.55 ಅಂಶ ಇಳಿದು 8,925.30 ಯಲ್ಲಿ ವಹಿವಾಟು ಕೊನೆಗೊಳಿಸಿತ್ತು. ಇನ್ನು ಫಾರಿನ್ ಪೋರ್ಟ್​ಫೋಲಿಯೋ ಇನ್​ವೆಸ್ಟರ್ಸ್​ ಗಳು ಬಂಡವಾಳ ಮಾರುಕಟ್ಟೆಯಲ್ಲಿ ಕೊನೆಯ ಟ್ರೇಡಿಂಗ್ ಸೆಷನ್​ನಲ್ಲಿ ನಿವ್ವಳ ಖರೀದಿದಾರರಾಗಿ ಕಂಡುಬಂದರು. ಅವರು ಒಟ್ಟು 1,358.66 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದರು. (ಏಜೆನ್ಸೀಸ್)