ಶಿವಮೊಗ್ಗ: ವಿನಾಯಕನಗರ ಅಮೀರ್ ಅಹಮ್ಮದ್ ಕಾಲನಿ ನಿವಾಸಿ, ಹಿರಿಯ ಛಾಯಾಗ್ರಾಹಕ ಶಿವಮೊಗ್ಗ ನಂದನ್(57) ಭಾನುವಾರ ಬೆಳಗಿನಜಾವ ಹೃದಯಾಘಾತದಿಂದ ನಿಧನರಾದರು. ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಭಾನುವಾರ ಸಂಜೆ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಕಾರ್ಯನಿತರ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ, ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನ ಟ್ರಸ್ಟಿಯೂ ಆಗಿದ್ದ ನಂದನ್, ಮೂಲತಃ ಹೊಸನಗರ ತಾಲೂಕಿನ ಅರಸಾಳು ಗ್ರಾಮದವರು. ಪರಿಸರ ಹೋರಾಟ ಮತ್ತು ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ರಂಗಕಲಾವಿದರೂ ಆಗಿ ಗುರುತಿಸಿಕೊಂಡಿದ್ದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಬಸವ ಕೇಂದ್ರದ ಡಾ. ಬಸವಮರುಳಸಿದ್ಧ ಸ್ವಾಮೀಜಿ, ಮುಖಂಡರಾದ ಎಚ್.ಸಿ.ಯೋಗೇಶ್, ನಾಗರಾಜ್ ಕಂಕಾರಿ ಸೇರಿದಂತೆ ಜಿಲ್ಲೆಯ ಹಿರಿಯ-ಕಿರಿಯ ಪತ್ರಕರ್ತರು ಅಂತಿಮ ದರ್ಶನ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಹಿತ ಹಲವರು ಸಂತಾಪ ಸೂಚಿಸಿದರು. ಬೆಳಗ್ಗೆಯಿಂದ ಅವರ ನಿವಾಸ ಮತ್ತು ಮಧ್ಯಾಹ್ನ ಪತ್ರಿಕಾ ಭವನದಲ್ಲಿ ಕೆಲವೊತ್ತು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಶಿವಮೊಗ್ಗ ನಂದನ್ ಕ್ಲಿಕ್ಕಿಸಿದ ಫೋಟೊಗಳು ಉತ್ತರಾಖಂಡದ ನೈನಿತಾಲ್, ನವದೆಹಲಿ, ಮುಂಬೈ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಫೋಟೊಗಳು ಪ್ರದರ್ಶನಗೊಂಡಿವೆ. ಕುವೆಂಪು ವಿಶ್ವವಿದ್ಯಾಲಯ, ಉಜಿರೆಯ ಎಸ್‌ಡಿಎಂ ಕಾಲೇಜಿ, ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿದ್ದರು. ಪ್ರಾಣಿಪಕ್ಷಿ ಪ್ರಿಯರಾಗಿದ್ದರು. ಗಾಯಗೊಂಡಿದ್ದ ಪ್ರಾಣಿ, ಪಕ್ಷಿಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದರು. ಮನೆಯಲ್ಲಿ ಅಳಿಲು, ಗಿಳಿ ಸೇರಿ ವಿವಿಧ ಪಕ್ಷಿಗಳನ್ನು ಸಾಕಿದ್ದರು. ಕಳೆದ ಬಾರಿ ಜಯನಗರ ವಾರ್ಡ್‌ನಿಂದ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧೆ ಮಾಡಿ ಜನರಿಂದಲೇ ಚಂದಾ ಸಂಗ್ರಹಿಸಿ ಮನೆ ಮನೆಗೆ ಹೋಗಿ ಪ್ರಚಾರ ನಡೆಸಿದ್ದರು. ಕೊಲ್ಕತ್ತಾದಲ್ಲಿ ರಾಷ್ಟ್ರೀಯ ಪ್ರಶಸ್ತಿ, 5 ರಾಜ್ಯ ಪ್ರಶಸ್ತಿ, ಜಿಲ್ಲಾಮಟ್ಟದಲ್ಲಿ ಅನೇಕ ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹ ವಿಶೇಷ ಪ್ರಶಸ್ತಿ, 2022ರಲಿ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಲಭಿಸಿತ್ತು.